

ಧಾರವಾಡ: ರಾಷ್ಟ್ರವ್ಯಾಪಿ ನಡೆಯುತ್ತಿರುವ 'ಮತಗಳ್ಳತನ ನಿಲ್ಲಿಸಿ' ಸ್ಟಿಕರ್ ಅಭಿಯಾನ ನಗರದಲ್ಲಿ ಮಂಗಳವಾರ ನಡೆಯಿತು. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ನೇತೃತ್ವದಲ್ಲಿ ವಿವಿಧೆಡೆ ಸ್ಟಿಕರ್ ಅಂಟಿಸುವ ಮೂಲಕ ಮತಗಳ್ಳತನದ ಕುರಿತು ಜಾಗೃತಿ ಮೂಡಿಸಿದರು.
ನಗರದ ರೈಲ್ವೆ ನಿಲ್ದಾಣದಿಂದ ವಿವಿಧ ರಸ್ತೆಗಳಲ್ಲಿ ಅಭಿಯಾನ ಕೈಗೊಂಡರು. ಗೋಡೆಗಳಿಗೆ ಸ್ಟಿಕರ್ ಅಂಟಿಸಿದರು.
ಅಬ್ದುಲ್ ದೇಸಾಯಿ ಮಾತನಾಡಿ, ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ನೀಡಿದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರವು ಈ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಮತಗಳ್ಳತನ ಮಾಡಿ ದೇಶದ ಜನರಿಗೆ ಅನ್ಯಾಯ ಮಾಡುತ್ತ ಬಂದಿದೆ ಎಂದು ಆರೋಪಿಸಿದರು.
ಈಗಾಗಲೇರಾಹುಲ್ ಗಾಂಧಿ ಅವರು ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಮತ ಕಳ್ಳತನವನ್ನು ಸಾರ್ವಜನಿಕವಾಗಿ ದಾಖಲೆ ಸಮೇತವಾಗಿ ವಿವರಿಸಿದ್ದಾರೆ ಎಂದರು.
ಫಿರೋಜ್ ಪಠಾಣ, ನಾಗರಾಜ ಕೊಟಗಿ, ಅರ್ಜುನ ಪಾಟೀಲ, ವಸಿಂ ಕಿತ್ತೂರು, ಶಾನವಾಜ, ಮುದಸ್ಸರ ಮುನೀರ್, ಸದ್ದಾಮ ಹುಸೇನ್, ಶಬಾಜ ಜಮಾದಾರ್, ಸೂರಜ ಗೌಳಿ, ಹುಸೇನ ನದಾಫ್, ದಾದಾಪೀರ್ ಹಂಚಿನಮನಿ ಇತರರಿದ್ದರು.