

ಕೊಳ್ಳೇಗಾಲ : ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಖಂಡಿಸಿ ಪಟ್ಟಣದಲ್ಲಿ ಬುಧವಾರ ಮಹಿಳೋದಯ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡ 50 ಕ್ಕೂ ಮಹಿಳೆಯರು ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ, ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಿರಂತರವಾಗಿ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಗಾಗಿ ಹಕ್ಕುಗಳಿಗಾಗಿ ಮಹಿಳೋದಯ ಮಹಿಳಾ ಒಕ್ಕೂಟವು ಮಹಿಳೆಯರ ಸುರಕ್ಷತೆಗೆ ಗ್ರಾಮಮಟ್ಟದಿಂದ ಕೇಂದ್ರ ಮಟ್ಟದವರೆಗೆ ಸೂಕ್ತ ಕ್ರಮ ಜಾರಿಗೊಳಿಸಲು ಹಕ್ಕೊತ್ತಾಯ ಮನವಿ ಮಾಡುತ್ತಿದೆ. ಕೋಲ್ಕತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಕೋರನಿಗೆ ಮರಣ ದಂಡನೆ ವಿಧಿಸಬೇಕು. ಮಹಿಳೆಯರ ಮೇಲಿನ ಹೀನಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣ ನಿರ್ಮಿಸಬೇಕು. ಎಲ್ಲ ಹೆಣ್ಣು ಮಕ್ಕಳ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ, ಕೇಂದ್ರ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಕೋರ್ಟ್‌ಗಳಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಮಾಡುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಮಹಿಳೆಯರು ನಿರ್ಭೀತಿಯಿಂದ ಜೀವಿಸಲು ತಳಮಟ್ಟದಿಂದ ಕಾನೂನು ಬಿಗಿಗೊಳಿಸಬೇಕು. ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಬೇಕು. ಈಗಿರುವ ಶಿಕ್ಷೆಯ ವಿಧಾನವನ್ನು ಬದಲಿಸಬೇಕು ಮತ್ತು ಶೀಘ್ರವೇ ತೀರ್ಪು ನೀಡಿ ಅತ್ಯಾಚಾರಿಗಳನ್ನು ಮಟ್ಟ ಹಾಕಬೇಕು. ಇದು ನಾಗರಿಕ ಸಮಾಜದಲ್ಲಿರುವ ಇತರ ವಿಕೃತ ಕಾಮುಕರಿಗೆ ಪಾಠವಾಗಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷ ರಾಜಮ್ಮ, ಸುಜಾತಾ, ಸಿದ್ದರಾಜಮ್ಮ, ನಾಗಸುಂದರ ಸೇರಿದಂತೆ ಹಲವು ಮಹಿಳೆಯರು ಇದ್ದರು.