

ಕುದೂರು: ಗ್ರಾಮದ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಟಿ.ಎಚ್. ಮಂಜುನಾಥ್ ಎಚ್ಚರಿಸಿದ್ದಾರೆ.
ಗ್ರಾಮದ ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಮಾತನಾಡಿದ ಅವರು, ಬಸ್ ನಿಲ್ದಾಣದೊಳಗೆ ಅಡ್ಡಾದಿಡ್ಡಿ ನಿಲ್ಲಿಸುವಂತಿಲ್ಲ. ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹರಟೆ ಹೊಡೆಯುವವರು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸೋಮವಾರದಿಂದ ಬಸ್ನಿಲ್ದಾಣದಲ್ಲಿ ಸಿಬ್ಬಂದಿ ನಿಯೋಜಿಸಿ ಪ್ರಯಾಣಿಕರು ಹಾಗೂ ಬಸ್ಗಳ ಸಂಚಾರಕ್ಕೆ ಆಗುತ್ತಿರುವ ಕಿರಿಕಿರಿ ತಪ್ಪಿಸಲಾಗುವುದು ಎಂದರು.
ಇದೇ ವೇಳೆ ಪ್ರಯಾಣಿಕರ ಬಸ್ಗಳ ಸುಗಮ ಸಂಚಾರಕ್ಕೆ ಬಸ್ ನಿಲ್ದಾಣದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಯಿತು.
ಬಸ್ಗಳು ನಿಲ್ದಾಣದ ಒಳ ಪ್ರವೇಶಿಸಲು ಹಾಗೂ ಹೊರ ಹೋಗಲು ಹಲವು ವರ್ಷಗಳಿಂದ ಸಮಸ್ಯೆಯಿತ್ತು. ಇದಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ಪಿಎಸ್ಐ ಮಂಜುನಾಥ್ಗೆ ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಅಭಿನಂದನೆ ಸಲ್ಲಿಸಿದರು.
ಕುದೂರು ಬಸ್ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಬಸ್ ಸಂಚಾರಕ್ಕೆ ಅಡ್ಡಪಡಿಸುವ ವಾಹನಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು | ಟಿ.ಎಚ್. ಮಂಜುನಾಥ್,ಪಿಎಸ್ಐ, ಕುದೂರು