

ಮೈಸೂರು: ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕೆಲವರು ಬಡ ಜನರಿಗೆ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುತ್ತಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್. ರಘು ಒತ್ತಾಯಿಸಿದರು.
ಬ್ಯಾಂಕ್‌ಗಳಿಂದ ಸಾಲ ದೊರೆಯದ ಹಿನ್ನೆಲೆಯಲ್ಲಿ ಬಡವರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಾರೆ. ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಗುರಿಯಾಗಿದ್ದಾರೆ. ಇವರು ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿ ಮನಸೋಇಚ್ಛೆ ಬಡ್ಡಿ ವಿಧಿಸುತ್ತಿದ್ದಾರೆ. ಕಂತುಗಳನ್ನು ಸಕಾಲದಲ್ಲಿ ಕಟ್ಟಲಾಗದ ವರಿಗೆ ದಂಡವನ್ನು ಸಹ ವಿಧಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಕ್ರೋ ಫೈನಾನ್ಸ್‌ಗಳು ವಾರ್ಷಿಕ ಶೇ.21.50 ರಿಂದ 25ರವರೆಗೆ ಬಡ್ಡಿ ವಿಧಿಸುತ್ತಿವೆ. ಪ್ರೋಸೆಸಿಂಗ್ ಶುಲ್ಕ ಹಾಗೂ ಹಾಗೂ ವಿಮೆ ಎಂದು ಹೆಚ್ಚುವರಿಯಾಗಿ ಶೇ.1ರಷ್ಟು ಹಣ ಪಡೆದುಕೊಳ್ಳುತ್ತಿದ್ದಾರೆ. ಸಾಲಗಾರರನ್ನು ಬೆದರಿಸಿ ಅವರು ಆತ್ಮಹತ್ಯೆಗೆ ಶರಣಾಗುವಂತೆ ಅಥವಾ ಮನೆ ಬಿಟ್ಟು ಹೋಗುವಂತಹ ವಾತಾವರಣ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಹಲವಾರು ಜನರ ಮನೆ, ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಅಥವಾ ನ್ಯಾಯಾಲಯದ ಮೂಲಕ ರಕ್ಷಣೆ ಪಡೆಯಲು ತಿಳಿಯದ ಜನರು ಮಾನಕ್ಕೆ ಹೆದರಿ ಊರು ಬಿಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ನವರು ನಿಯಮದ ಪ್ರಕಾರ ಸಾಲ ವಸೂಲಾತಿ ಮಾಡದೆ ಜನರಿಗೆ ಧಮ್ಕಿ ಹಾಕುತ್ತಿದ್ದಾರೆ. ಹಾಗಾಗಿ ರಾಜ್ಯದ ಗೃಹ ಇಲಾಖೆ, ಹಣಕಾಸು ಇಲಾಖೆ ಹಾಗೂ ಕಾನೂನು ಇಲಾಖೆ ಜಂಟಿಯಾಗಿ ಒಂದು ಸಮಿತಿ ರಚಿಸಿ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ವಕ್ತಾರ ಎಂ.ಮೋಹನ್ ಇದ್ದರು.