ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಹಚ್ಚುವ ಕೆಲಸ ನಿಲ್ಲಿಸಿ; ಎಸ್.ಎಂ. ಪಾಟೀಲ ಗಣಿಹಾರ

smp
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಡಾ. ರವಿ ಬಿರಾದಾರ, ಫಯಾಜ್ ಕಲಾದಗಿ ಇದ್ದಾರೆ.
Published on

ವಿಜಯಪುರ: ನೇರ, ನಿಷ್ಠುರ, ಪ್ರಾಮಾಣಿಕ ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಹಚ್ಚುವ ಕೆಲಸ ಬಿಜೆಪಿಯರುವ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿಯೇ ಮುಳಿಗೇಳುತ್ತಿರುವ ಬಿಜೆಪಿಗರಿಗೆ ಸಿದ್ದರಾಮಯ್ಯ ಬಗ್ಗೆ ಟೀಕಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಅಹಿಂದ ಮುಖಂಡ, ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಪಡೆದ ನಿವೇಶನಗಳು ಕೇವಲ ವ್ಯವಹಾರ ಅಷ್ಟೆ. ಅದೊಂದು ಕೊಟ್ಟು- ತೆಗೆದುಕೊಳ್ಳುವ ವ್ಯವಹಾರ. ಹೀಗಾಗಿ ಇದರಲ್ಲಿ ಹಗರಣ ಎಲ್ಲಿಂದ ಬಂತು? ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಅಳಿಯ ಮಲ್ಲಿಕಾರ್ಜುನ ಅವರು ತಮ್ಮ ಸಹೋದರಿ ಪಾರ್ವತಿ ಅವರಿಗೆ ಗಿಫ್ಟ್ ನೀಡಿದ್ದಾರೆ. ಮುಡಾದವರು ಈ ಭೂಮಿ ಸ್ವಾಧೀನಪಡಿಸಿಕೊಂಡು ಅದಕ್ಕೆ ಪರ್ಯಾಯವಾಗಿ ಶೇ.50 ರ ಅನುಪಾತದಲ್ಲಿ ಭೂಮಿ ಹಂಚಿಕೆ ಮಾಡಿದ್ದಾರೆ. ಆಗ ಬಿಜೆಪಿಯದ್ದೇ ಆಡಳಿತ ಇತ್ತು. ಹೀಗಿರುವಾಗ ಹಗರಣ ಎಲ್ಲಿ ಬಂತು? ಹಗರಣ ಮಾಡಿದವರೇ ಹಗರಣ ಎಂಬ ಗುಲ್ಲು ಎಬ್ಬಿಸುತ್ತಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಸಾಕಷ್ಟು ಬೆಲೆ ಬಾಳುವ ಜಮೀನುಗಳನ್ನು ಸಂಘ ಪರಿವಾರಕ್ಕೆ ಬಿಟ್ಟುಕೊಟ್ಟ ಉದಾಹರಣೆಗಳಿವೆ. ಆ ಬಗ್ಗೆ ತನಿಖೆಯಾಗಬೇಕೆಂದರು.

ಯತ್ನಾಳ ವಿರುದ್ಧ ವಾಗ್ದಾಳಿ

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ರದ್ದು ಮಾಡಲು ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದ್ದಾರೆ. ಆ ಮೂಲಕ ಬಡವರ ವಿರೋಧಿ ನಿಲುವು ಬಹಿರಂಗಪಡಿಸಿದ್ದಾರೆ ಎಂದು ಗಣಿಹಾರ ಟೀಕಿಸಿದರು.
ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಬಡವರಿಗೆ ತಲುಪಿವೆ. ಹೀಗಿರುವಾಗ ಈ ಯೋಜನೆ ನಿಲ್ಲಿಸುವಂತೆ ಹೇಳಿರುವ ಯತ್ನಾಳ ಬಡವರ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದು ಬಿಜೆಪಿ ನಿಲುವು ಕೂಡ ಹೌದು ಎಂದರು.

ಬಿಜೆಪಿ ಹಗರಣ

ಬಿಜೆಪಿಯೇ ಒಂದು ಭ್ರಷ್ಟ ಕೂಟ. ಮಾಡಾಳ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಎಂಟು ಕೋಟಿ ರೂಪಾಯಿ ಸಿಕ್ಕಿದ್ದರ ಬಗ್ಗೆ, ನೀಟ್ ಹಗರಣದ ಬಗ್ಗೆ ಬಿಜೆಪಿ ಮೌನ ಮುರಿಯುತ್ತಿಲ್ಲವೇಕೆ? ಕೆ.ಎಶ್. ಈಶ್ವರಪ್ಪ ಅವರ ಹಗರಣವನ್ನೇ ಮುಚ್ಚಿಹಾಕಿರುವ ಬಿಜೆಪಿಗರಿಗೆ ಈಗ ಕಾಂಗ್ರೆಸ್ ಬಗ್ಗೆ ಟೀಕಸಿವು ಯಾವ ನೈತಿಕ ಹಕ್ಕಿದೆ? ಪಿಎಂ ಕೇರ್ ಫಂಡ್ ಮಾಹಿತಿ ಕೊಡಬಾರದೆಂದು ಏಕೆ ಕಾಯ್ದೆ ಮಾಡಿದಿರಿ? ರಫೆಲ್ ಫೈಲ್ ಕಳೆದಿವೆ ಎಂದ ನಿಮಗೆ ಭ್ರಷ್ಟಾಚಾರ ಬಗ್ಗೆ ಮಾತನಾಡಲು ನೈತಿಕ ಹಕ್ಕಿದೆಯೇ? ಎಂದು ಸಾಲು ಸಾಲು ಪ್ರಶ್ನೆ ಹಾಕಿದರು.

ಪರಿಶಿಷ್ಟ ವರ್ಗಗಳ ಮೀಸಲು ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸುವವರು ಹಿಂದೆ ಪವಿತ್ರ ಕೇಸ್ ನಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ಲಕ್ಷಾಂತರ ಜನ ಪರಿಶಿಷ್ಟರು ಹಿಂಬಡ್ತಿ ಪಡೆಯುವಂತೆ ಮಾಡಿದರು. ಆಗ ಸಿದ್ದರಾಮಯ್ಯ ಅವರು ವಿಶೇಷ ಕಾನೂನು ತಂಡು ದಲಿತ ವರ್ಗದ ಎಲ್ಲ ನೌಕರರಿಗೆ ಅನುಕೂಲ ಮಾಡಿದರು. ಮೀಸಲಾತಿ ತೆಗೆಯಲು ಸರ್ಕಾರಿ ವಲಯಗಳನ್ನೇ ಖಾಸಗಿಗೆ ಮಾರಾಟ ಮಾಡುತ್ತಿರುವವರು ಬಿಜೆಪಿಗರು. ಮೀಸಲಾಯಿ ತಪ್ಪಿಸಲು ಖಾಸಗೀಕರಣ ಪ್ರಕ್ರಿಯೆಗೆ ಮುನ್ನುಡಿ ಬರೆದರು. ಆದರೂ, ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ಡಾ. ರವಿ ಬಿರಾದಾರ ಮಾತನಾಡಿ, 2500 ಕೋಟಿ ರೂಪಾಯಿಗೆ ಸಿಎಂ ಸ್ಥಾನ ಬಿಕರಿಗೆ ಇಡಲಾಗಿದೆ ಎಂದು ಬಿಜೆಪಿಯದ್ದೇ ಶಾಸಕರು ಮಾತನಾಡಿದ್ದರು. ಬಿಜೆಪಿ ಹಲವು ಭ್ರಷ್ಟಾಚಾರಗಳಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ ಎಂದರು.
ಮುಖಂಡ ಫಯಾಜ್ ಕಲಾದಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net