

ರಾಯಚೂರು: ಕೇಂದ್ರ ಸರ್ಕಾರ ರೈಲ್ವೆ ಮತ್ತು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದಕ್ಕೆ ಮುಂದಾಗಿರುವುದನ್ನು ಖಂಡಿಸಿ ನಗರದ ರೈಲು ನಿಲ್ಧಾಣದ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರೈಲ್ವೆ ಇಲಾಖೆ ನಮ್ಮ ಆರ್ಥಿಕತೆಯ ಜೀವಾಳವಾಗಿದ್ದು, ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತೀಯ ರೈಲ್ವೆ ದೇಶದ ಅತ್ಯಂತ ದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ.
ಜತೆಗೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ವಿದ್ಯುತ್ ಮಸೂದೆ 2022ರ ಮೂಲಕ ಸಾರ್ವಜನಿಕ ಸೇವಾ ಉದ್ದೇಶ ಹೊಂದಿರುವ ಎಸ್ಕಾಂಗಳನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಜನರಿಗೆ ಆರ್ಥಿಕ ಹೊರೆ ಬೀಳಲಿದೆ.
ವಿದ್ಯುತ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಮಾಡಿದಲ್ಲಿ ಖಾಸಗಿ ವಿದ್ಯುತ್ ವಿತರಣೆಗಾಗಿ ಸರ್ಕಾರಿ ಸ್ವಾಮ,್ಯದಲ್ಲಿರುವ ಸೌಕರ್ಯಗಳನ್ನು ಬಳಸಿಕೊಂಡು ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗಲಿದೆ.
ಈಗಾಗಲೇ ಪ್ರಿಪೇಡ್ ಮೀಟರ್ ಅಳವಡಿಕೆ ಮಾಡಲಾಗುತ್ತಿದದು, ಪಂಪ್‌ಸೆಟ್ ಗ್ರಾಹಕರಿಗೂ ಹಣ ಪಾವತಿಸಿದರೆ ಮಾತ್ರ ವಿದ್ಯುತ್ ಸಿಗುವ ಕಾಲ ಬರಲಿದೆ. ಬಡ ಬಳಕೆದಾರರು ಬಿಲ್ ಕಟ್ಟಲಾಗದೆ ಕತ್ತಲಲ್ಲೇ ಕಾಲ ಕಳೆಯುವಂತಾಗಲಿದೆ. ಕಾರಣ ರೈಲ್ವೆ ಮತ್ತು ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ಡಿ.ಎಸ್.ಶರಣಬಸವ, ಪದಾಕಾರಿಗಳಾದ ಶಬ್ಬೀರ್ ಜಾಲಹಳ್ಳಿ, ವರಲಕ್ಷ್ಮಿ, ಗಿರಿಯಪ್ಪ, ಗೋಕುರಮ್ಮ, ಶರಣಮ್ಮ ಪಾಲ್ಗೊಂಡಿದ್ದರು.