

ಹುಬ್ಬಳ್ಳಿ: ಮಳೆ, ಕಾರ್ಮಿಕರ ಕೊರತೆ ನೆಪ ಬಿಟ್ಟು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು.
ಇಲ್ಲಿಯ ಚನ್ನಮ್ಮ ವೃತ್ತದಿಂದ ಬಸವ ವನ ವೃತ್ತದವರೆಗೆ ಮೇಲ್ಸೇತುವೆ ಕಾಮಗಾರಿ ಭಾನುವಾರ ವೀಕ್ಷಿಸಿದ ಶಾಸಕರು, ಕಳೆದ ಬಾರಿ ವೀಕ್ಷಣೆ ಮಾಡಿದ ವೇಳೆ ಕಾಮಗಾರಿ ಪ್ರಗತಿಯಲ್ಲಿತ್ತು. ಈಗ ನೆಪ ಹೇಳಿ ಕಾಮಗಾರಿ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಿಟ್ಟಾದರು.
ನಿಗದಿತ ಅವಧಿಯಲ್ಲಿ ಕೆಲಸ ಮಾಡಬೇಕು. ಇಲ್ಲವಾದರೆ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಅಧಿವೇಶನ ಮುಗಿದ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿಯ ಸತೀಶ ನಾಗನೂರ, ಬಿಜೆಪಿ ಮುಖಂಡ ರವಿ ನಾಯ್ಕ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ ಇತರರು ಇದ್ದರು.