ಕೇಂದ್ರದತ್ತ ಬೊಟ್ಟು ಮಾಡುವುದನ್ನು ನಿಲ್ಲಿಸಿ, ರಾಜ್ಯ ಸರ್ಕಾರಕ್ಕೆ ಸಂಸದ ರಮೇಶ ಜಿಗಜಿಣಗಿ ಖಡಕ್ ಸಂದೇಶ

ramesh jigajinagi
Published on

ವಿಜಯಪುರ: ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಪದೇ ಪದೇ ಕೇಂದ್ರದತ್ತ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ರೈತರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ರೂ.ರೂ.3500 ನೀಡಬೇಕೆಂದು ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದರು.

ಇಲ್ಲಿನ ಗಗನ ಮಹಲ್ ಬಳಿ ನಡೆಯುತ್ತಿರುವ ರೈತರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ರಾಜ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುವ ಚಾಳಿ ಬಿಡಬೇಕು. ಈಗಾಗಲೇ ಕೇಂದ್ರ ಸರ್ಕಾರ ಎಫ್‌ಆರ್‌ಪಿ ಘೋಷಣೆ ಮಾಡಿದೆ. ಆ ಪ್ರಕಾರ ರೈತರಿಗೆ ಸೂಕ್ತ ದರ ನೀಡಬೇಕಿದೆಯಲ್ಲದೇ ಉಪ ಉತ್ಪನ್ನಗಳ ಲಾಭಾಂಶದಲ್ಲಿಯೂ ಹೆಚ್ಚಿನ ಪಾಲು ರೈತರಿಗೆ ಸಿಗಬೇಕಿದೆ. ಕೂಡಲೇ ಆ ಎಲ್ಲ ಮೊತ್ತ ಸೇರಿಸಿ ದರ ಘೋಷಿಸಿ ಕಬ್ಬು ನುರಿಸಲು ಆರಂಭಿಸಬೇಕೆಂದು ಆಗ್ರಹಿಸಿದರು.

ಸದ್ಯ ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ಹತ್ತಿ, ತೊಗರಿ, ಈರುಳ್ಳಿ ಮತ್ತಿತರ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಇರುವುದರಲ್ಲಿಯೇ ಕಬ್ಬು ಒಂದೇ ರೈತರಿಗೆ ಆಸರೆಯಾಗಿದೆ. ಅದಕ್ಕೂ ಸೂಕ್ತ ಬೆಲೆ ಸಿಗದೇ ಹೋದರೆ ರೈತರು ಸಾವಿನ ದಾರಿ ಕಂಡುಕೊಳ್ಳಭೇಕಾಗುತ್ತದೆ. ಕೂಡಲೇ ರಾಜ್ಯ ಸರ್ಕಾರ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net