ಬಡ ಕುಟುಂಬಗಳ ಮೇಲಿನ ದಬ್ಬಾಳಿಕೆ ನಿಲ್ಲಿಸಿ

Stop oppression of poor families
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಭೂ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ಸಲಹಾ ಸಮಿತಿ ಅಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಪಾತ್ರೋಟಿ, ಮುಖಂಡರಾದ ರಾಜು ಸಂಗಮ, ಗುರುನಾಥ ಮ್ಯಾಗೇರಿ, ಆರ್.ಎಚ್.ಗೌಡರ, ವೈ.ವೈ.ತಿಮ್ಮಾಪುರ ಇದ್ದರು.
Published on

ಬಾಗಲಕೋಟೆ: ಕರ್ನಾಟಕ ರಾಜ್ಯದ ಅರಣ್ಯ ಭೂಮಿಯಲ್ಲಿ ನೂರಾರು ವರ್ಷಗಳಿಂದ ಬಡ ಕುಟುಂಬಗಳು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಅವರನ್ನು ತೆರವುಗೊಳಿಸಲು ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಇದಕ್ಕೆ ತಡೆ ನೀಡಿ ಹಲವಾರು ವರ್ಷಗಳಿಂದ ಅಲ್ಲಿ ಉಳುಮೆ ಮಾಡುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಕರ್ನಾಟಕ ರಾಜ್ಯ ಭೂ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ಸಲಹಾ ಸಮಿತಿ ಅಧ್ಯಕ್ಷ ರಾಜು ಮನ್ನಿಕೇರಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರು, ಕೂಲಿಕಾರ್ಮಿಕರು ರೈತರು, ಮಧ್ಯಮ ವರ್ಗದವರು ನೂರಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಅರಣ್ಯ, ಗೋಮಾಳ, ದೇಶಗತಿ ಭೂಮಿಗಳಲ್ಲಿ ಉಳುಮೆ ಮಾಡುತ್ತ ಬಂದಿದ್ದು, ಇವೆಲ್ಲವೂ ಕೂಡ ಪೂರ್ವಜರ ಕಾಲದಿಂದ ಬಳಕೆ ಮಾಡುತ್ತ ಬಂದಿದ್ದಾರೆ. ಅವುಗಳಿಗೆ ಹಕ್ಕು ನೀಡಲು 1971-72 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಊಳುವವನೇ ಒಡೆಯ ಜಾರಿಗೆ ತಂದರು. ಆ ಸಂದರ್ಭದಲ್ಲಿ ಅನಕ್ಷರಸ್ಥ ರೈತರಿಂದ ಅರ್ಜಿ ಭರ್ತಿ ಮಾಡಲು ಸಾಧ್ಯವಾಗಿಲ್ಲ. ನಂತರ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ, ನಾಡಕಚೇರಿಗಳಲ್ಲಿರುವ ಅವುಗಳನ್ನು ಪುರಸ್ಕರಿಸಬೇಕು ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಗರ್ ಹುಕುಂ ಅಡಿಯಲ್ಲಿ ಕೃಷಿ ಮಾಡಿಕೊಂಡಿರುವ ರೈತರ ಜಮೀನು ಹಾಗೂ ಭೂಮಿ ಅವರವರ ಹೆಸರಿನಲ್ಲಿ ಮಾಡಲು ಅಕ್ರಮ ಸಕ್ರಮ ಯೋಜನೆಯಡಿ ಮಾಡಲು ಅಧಿಕಾರ ಇದೆ ಎಂದು ತಿಳಿಸಿದ್ದರು. ಆದರೆ ಇದು ಇಲ್ಲಿಯವರೆಗೆ ಈಡೇರಿಲ್ಲ. ಹೀಗಾಗಿ ಶೀಘ್ರದಲ್ಲೇ ರಾಜ್ಯದ ವಿವಿಧ ಭಾಗದಿಂದ ಸಮಿತಿ ಪದಾಧಿಕಾರಿಗಳು ಸೇರಿಕೊಂಡು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಕರ್ನಾಟಕ ರಾಜ್ಯ ಭೂ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಪಾತ್ರೋಟಿ ಮಾತನಾಡಿ, ಜಿಲ್ಲೆಯಲ್ಲಿ 8 ರಿಂದ 10 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ರೈತರು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಆತಂಕ ಮನೆ ಮಾಡಿದೆ. ಸರ್ಕಾರ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಂಡು ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ರಾಜು ಸಂಗಮ, ಗುರುನಾಥ ಮ್ಯಾಗೇರಿ, ಆರ್.ಎಚ್.ಗೌಡರ, ವೈ.ವೈ.ತಿಮ್ಮಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net