

ಹೊನ್ನಾಳಿ: ತಾಲೂಕಿನ ತುಗ್ಗಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ತತ್‌ಕ್ಷಣ ಬಂದ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತುಗ್ಗಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.
ಭಾನುವಾರ ಶಾಸಕ ಶಾಂತನಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಗ್ರಾಮದ ಸಮೀಪ ನಡೆಯುತ್ತಿರುವ ಕಲ್ಲುಗಾಣಿಗಾರಿಕೆಯಿಂದ ಹೊಲಗದ್ದೆಗಳಿಗೆ ಹಾಗೂ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರ ಕಲ್ಲುಗಣಿಗಾರಿಕೆ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಕಲ್ಲುಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ಕಾನೂನಿನ ವ್ಯಾಪ್ತಿಯಲ್ಲಿ ಈ ಬಗ್ಗೆ ವರದಿ ತರಿಸಿಕೊಂಡು ಆಗುತ್ತಿರುವ ತೊಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರಾದ ಚಂದ್ರಪ್ಪ, ಭರತ್, ರಾಜಪ್ಪ, ಪ್ರಭು, ಬಸವರಾಜಪ್ಪ, ಭರಮಗೌಡ, ಕೋಮೇಶಪ್ಪ, ರಮೇಶ್ ಕತ್ತಿಗೆ, ಜಗದೀಶ್ ಕಡದಕಟ್ಟೆ, ಬಸವರಾಜಪ್ಪ ಇದ್ದರು.