ಅಕ್ರಮ ಚಟುವಟಿಕೆಗೆ ತಡೆ ಹಾಕಿ

4
Published on

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಕೆ. ಷಡಕ್ಷರಿ ಸೂಚನೆ

ವಿಜಯವಾಣಿ ಸುದ್ದಿಜಾಲ ತಿಪಟೂರು
ಎಪಿಎಂಸಿಗೆ ಬಂದಿರುವ ಕೆಟ್ಟ ಹೆಸರು ನನ್ನ ಕಾಲದಲ್ಲಾದರೂ ಸರಿಯಾಗಲಿ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಎಲ್ಲಿಂದಲೋ ಬಂದ ದಲ್ಲಾಳಿಗಳು ಸ್ಥಳಿಯ ಎಪಿಎಂಸಿಯಲ್ಲಿ ವರ್ತಕರಾಗಿ ಗುರುತಿಸಿಕೊಂಡು, ಸರ್ಕಾರಕ್ಕೆ ಹಾಗೂ ಸ್ಥಳಿಯ ವರ್ತಕರಿಗೂ ತೆರಿಗೆ ವಂಚಿಸಿ ಪರಾರಿಯಾಗುತ್ತಿರುವ ದಲ್ಲಾಳಿಗಳ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಇದರಲ್ಲಿ ನಾನು ಕೂಡ ಹೊರತಾಗಿಲ್ಲ. ನನಗೂ ವಂಚಿಸಿದ ದಲ್ಲಾಳಿಯೋರ್ವ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದರು.


ಸುತ್ತಮುತ್ತಲ 7 ಜಿಲ್ಲೆಗಳ ರೈತರ ಪಾಲಿಗೆ ಅನುಕೂಲವಾಗಿದ್ದ ಮತ್ತು ಇಡಿ ಏಷ್ಯಾ ಖಂಡದಲ್ಲಿ ಹೆಸರು ಮಾಡಿದ್ದ ತಿಪಟೂರು ಎಪಿಎಂಸಿ ಮಾರುಕಟ್ಟೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿನ ಕಾರ್ಯದರ್ಶಿ ದಕ್ಷರು ಎಂಬ ಕಾರಣಕ್ಕೆ ಇಲ್ಲಿಯೇ ಉಳಿಸಿಕೊಂಡಿದ್ದೇನೆ. ಇನ್ನು ಮುಂದಾದರೂ ಅಕ್ರಮ ವ್ಯಾಪಾರ ಚಟುವಟಿಕೆಗಳಿಗೆ ತಡೆ ಹಾಕಬೇಕು. ರೈತರು ಮಾರುಕಟ್ಟೆಗೆ ತರುವ ಪ್ರತಿ ಚೀಲ ಕೊಬ್ಬರಿಯ ಲೆಕ್ಕವಿರಲಿ. ಕೊಬ್ಬರಿ ಎಲ್ಲಿಂದ ಬಂದು, ಯಾರ ಅಂಗಡಿಗೆ ಹೋಯಿತು. ನಂತರ ಆ ಅಂಗಡಿಯ ದಾಸ್ತಾನಿನ ವಿವರವನ್ನು ಕಲೆ ಹಾಕಬೇಕು. ಈ ಮೂಲಕ ಸರ್ಕಾರಕ್ಕೆ ಸಲ್ಲಬೇಕಾದ ತೆರಿಗೆ ಮತ್ತು ನಿಮಗೆ ಸಲ್ಲಬೇಕಾದ ಸೆಸ್​ ಅನ್ನು ಸಂಗ್ರಹಿಸಬೇಕು. ಆದರೆ, ಯಾವುದೇ ಕಾರಣಕ್ಕೂ ಮೋಸ ಮಾಡಿ ಪರಾರಿಯಾಗುವ ದಲ್ಲಾಳಿ ಅಥವಾ ವರ್ತಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಿ ಎಂದು ಕಾರ್ಯದರ್ಶಿ ಎಸ್​.ಬಿ. ನ್ಯಾಮಗೌಡ ಅವರಿಗೆ ತಾಕೀತು ಮಾಡಿದರು.

ಕೆರೆಗಳಿಗೆ ನೀರು ತುಂಬಿಸಲು ಸಿದ್ಧತೆ: ಸೆ.6ರಂದು ಮೊದಲ ಹಂತದ ಎತ್ತಿನಹೊಳೆ ನೀರು ಹಾಸನ ಜಿಲ್ಲೆಯ ಹಳೇಬೀಡಿನವರೆಗೂ ತಲುಪಲಿದೆ. ಡಿಸೆಂಬರ್​ ಹಂತದಲ್ಲಿ ಜಿಲ್ಲೆ ಪ್ರವೇಶಿಸಲಿದೆ. ಉಳಿದ ಮೂರು ತಿಂಗಳಲ್ಲಿ ಎತ್ತಿನಹೊಳೆ ವ್ಯಾಪ್ತಿಗೆ ಸೇರುವ ಕೆರೆಗಳಿಗೆ ನೀರು ತುಂಬಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಣ್ಣ ನೀರಾವರಿ, ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಮತ್ತು ನಾಲಾ ವಲಯದ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಕೆರೆ ಅಂಗಳ ಮತ್ತು ರಾಜ ಕಾಲುವೆ ಒತ್ತುವರಿ ನಡೆದಿರುವುದು ಕಂಡು ಬಂದರೆ, ನನ್ನ ಜಮೀನಿದ್ದರೂ ಮುಲಾಜಿಲ್ಲದೇ ತೆರವುಗೊಳಿಸಿ. ಅಗತ್ಯಬಿದ್ದಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ. ಈ ವಿಷಯದಲ್ಲಿ ಯಾರ ಶಿಫಾರಸು ನಡೆಯುವುದಿಲ್ಲ ಎಂದರು.

ಕುರಿಗಾಹಿಗಳಿಗೆ ಗುರುತಿನ ಚೀಟಿ: ತಾಲೂಕಿನಲ್ಲಿ 90 ಸಾವಿರ ಕುರಿಗಳಿದ್ದು, ಮುಖ್ಯಮಂತ್ರಿಗಳ ಆದೇಶದಂತೆ ಕುರಿಗಾಹಿಗಳಿಗೆ ಗುರುತಿನ ಚೀಟಿ ಮತ್ತು ಕುರಿಗಳಿಗೆ ಉಚಿತ ಲಸಿಕೆ ಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ. ಜಾನುವಾರುಗಳ ವಿಮೆಗೆ ಸರ್ಕಾರ ಅನುಮತಿಸಬೇಕಿದೆ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಜಿ.ನಂದೀಶ್​ ಸಭೆಗೆ ತಿಳಿಸಿದರು.

ಅಂಗನವಾಡಿ ಪಡಿತರದಲ್ಲಿ ಅಕ್ರಮ?
ತಾಲೂಕಿನ ನೊಣವಿನಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿರದಿದ್ದರೂ ಜಿಪಿಎಸ್​ ಮೂಲಕ ಇಲಾಖೆಗೆ ಹಾಜರಾತಿ ತೋರಿಸಲಾಗುತ್ತಿದೆ. ಹಾಗಿದ್ದಲ್ಲಿ ಮಕ್ಕಳ ಹೆಸರಲ್ಲಿ ಬಿಡುಗಡೆಯಾದ ಆಹಾರ ಪದಾರ್ಥ ಮತ್ತು ಗರ್ಭಿಣಿಯರಿಗೆ ವಿತರಿಸಬೇಕಿರುವ ಆಹಾರ ಪದಾರ್ಥ ಏನಾಯ್ತು? ಎಂದು ಪ್ರಶ್ನಿಸಿದ ಶಾಸಕರು, ತಾಲೂಕಿನ ನ್ಯಾಕೇನಹಳ್ಳಿ ಅಂಗನವಾಡಿ ಕೇಂದ್ರದಲ್ಲೂ ಗರ್ಭಿಣಿಯರಿಗೆ ಮೀಸಲಾದ ಆಹಾರ ವಿತರಣೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇನ್ನು ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮಕ್ಕಳಿರುವ ಅಂಗನವಾಡಿ ಕೇಂದ್ರಗಳಲ್ಲಿ ಈ ರೀತಿಯ ಚಟುವಟಿಕೆಗಳು ನಡೆದರೆ, ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಮೇಲ್ವಿಚಾರಕರು ಈ ವಿಷಯದಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.

ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಅಥವಾ ಉಪ- ಮಾರುಕಟ್ಟೆಯಲ್ಲೇ ಮಾರಬೇಕು. ಬಿಲ್​ ಇಲ್ಲದೇ ಸಾಗಿಸುವ ಕೊಬ್ಬರಿ ಪತ್ತೆಯಾದಲ್ಲಿ ಸರಕು ಸಾಗಣೆ ವಾಹನದ ಜತೆಗ ಸರಕನ್ನು ವಶಕ್ಕೆ ಪಡೆದು ದಂಡ ವಿಧಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಮುಂದಿನ ದೀಪಾವಳಿ ಹೊತ್ತಿಗೆ ಕೊಬ್ಬರಿ ದರ ಕ್ವಿಂಟಾಲಿಗೆ 15 ಸಾವಿರಕ್ಕೂ ಹೆಚ್ಚಾಗಲಿದೆ.| ಕೆ.ಷಡಕ್ಷರಿ ಶಾಸಕ, ತಿಪಟೂರು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.80ರಷ್ಟಿದೆ ಎನ್ನುತ್ತೀರಿ, ಈ ಪೈಕಿ ವಿದ್ಯಾರ್ಥಿಗಳು ಗಳಿಸಿರುವ ಶೇಕಡಾವಾರು ಲೆಕ್ಕ ಏಕೆ ನೀಡುತ್ತಿಲ್ಲ. ಪಾಲಕರು ಮಕ್ಕಳನ್ನು ಯುಕೆಜಿಯಿಂದಲೇ ಖಾಸಗಿ ಶಾಲೆಗಳಿಗೆ ಕಳಿಸುವ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ ಎಂಬುದನ್ನು ಒಪು$್ಪವಂತಿಲ್ಲ. ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್​ ಮಾಧ್ಯಮ ಶಿಕ್ಷಣವಿದೆ. ಇದಕ್ಕೆ ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯ ನಿಷ್ಠೆ ಕಡಿಮೆಯಾಗಿರುವುದೇ ದಾಖಲಾತಿ ಕಡಿಮೆಯಾಗಲು ಕಾರಣ.| ಹುಲಿರಾಜ್​ ಆಡಳಿತಾಧಿಕಾರಿ, ತಾಲೂಕು ಪಂಚಾಯಿತಿ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net