

ಮಡಿಕೇರಿ: ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ನಿರಂತರ ಶೋಷಣೆ, ದೌರ್ಜನ್ಯ, ಹಿಂಸೆ ನಿಲ್ಲಬೇಕು. ಜತೆಗೆ ಮಕ್ಕಳನ್ನು ಬಿಕ್ಷಾಟನೆ, ದುಡಿಮೆಗೆ ದೂಡುವುದು ತಪ್ಪಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾರ್ಮಿಕ, (ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ), ಪೊಲೀಸ್, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಸ್ಥಾನ ನೀಡಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳು ಮಹಿಳೆಯರು ಮತ್ತು ಮಕ್ಕಳಿಗೆ ತಲುಪಬೇಕು. ಮಹಿಳೆಯರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳ ಕಳ್ಳ ಸಾಗಾಣಿಕೆ ತಡೆಯುವಲ್ಲಿ ಎಲ್ಲರೂ ಎಚ್ಚರವಹಿಸಬೇಕಿದೆ. ಕೊಡಗು ಜನಸಂಖ್ಯೆಯಲ್ಲಿ ಚಿಕ್ಕ ಜಿಲ್ಲೆಯಾದರೂ ಸಹ ನಾಪತ್ತೆ, ಕಳ್ಳ ಸಾಗಾಣಿಕೆ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಮಾನವ ಕಳ್ಳ ಸಾಗಾಣಿಕೆ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡುವಂತಾಗಬೇಕು. ಮಕ್ಕಳಿಗೆ ಪುನರ್ ವಸತಿ ಕಲ್ಪಿಸುವಂತಾಗಬೇಕು ಎಂದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಹೆಡ್ ಕಾನ್ಸ್‌ಟೇಬಲ್ ಸುಮತಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ೬ ತಿಂಗಳಲ್ಲಿ ಕಾಣೆಯಾದ ೩೧ ಮಕ್ಕಳ ಪ್ರಕರಣಗಳು ದಾಖಲಾಗಿದ್ದು, ೩೧ರಲ್ಲಿ ೨೮ ಮಕ್ಕಳನ್ನು ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸಲಾಗಿದೆ. ಉಳಿದ ಮೂವರು ಮಕ್ಕಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರು ಕೆಲಸದಲ್ಲಿ ಶೋಷಣೆ, ವಂಚನೆಗೆ ಒಳಪಡುವುದು ಹೆಚ್ಚಾಗಿ ಕಂಡು ಬರುತ್ತದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಮಹಿಳೆಯರು ಆಸೆ ಆಮಿಷಗಳಿಗೆ ತುತ್ತಾಗದೆ ಪ್ರಶ್ನೆ ಮಾಡುವ ಮತ್ತು ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವಿರಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್, ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ವೈ.ಮೈಮೂನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ, ಸಿಡಿಪಿಒ ಸೀತಾಲಕ್ಷ್ಮಿ, ವಕೀಲ ಕೆ.ಆರ್.ವಿದ್ಯಾಧರ, ಬಾಲ ಕಾರ್ಮಿಕ ಸೊಸೈಟಿಯ ಯೋಜನಾ ನಿರ್ದೇಶಕ ಸಿರಾಜ್ ಅಹಮದ್, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇತರರು ಇದ್ದರು.