

ಲಕ್ಷ್ಮೇಶ್ವರ: ಮಾನವ ಕಳ್ಳ ಸಾಗಣೆ ಜಾಲಕ್ಕೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಿಲುಕುತ್ತಿದ್ದಾರೆ. ಇದನ್ನು ತಡೆಯಲು ಅರಿವು ಮೂಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಪದ್ಮಶ್ರೀ ಆರ್. ಪಾಟೀಲ ಹೇಳಿದರು.
ಮಾನವ ಕಳ್ಳ ಸಾಗಣೆ ತಡೆ ದಿನದ ಅಂಗವಾಗಿ ಪಟ್ಟಣದ ಆಕ್ಸ್ಫರ್ಡ್ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್, ಕಂದಾಯ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಪಿಡುಗಾದ ಮಾನವ ಕಳ್ಳ ಸಾಗಣೆ ತಡೆಯಲು ಭವಿಷ್ಯದ ಪ್ರಜೆಗಳಾದ ಮಕ್ಕಳು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿವಾಣಿ ನ್ಯಾಯಾಧೀಶ ಸತೀಶ ಎಂ. ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ವಕೀಲ ಪಿ.ಎಂ. ವಾಲಿ ಅವರು ಮಾನವ ಕಳ್ಳ ಸಾಗಣೆ ವಿಷಯದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ವಾಸುದೇವಸ್ವಾಮಿ, ಸಹಾಯಕ ಸರ್ಕಾರಿ ಅಭಿಯೋಜಕ ಹೀನಾ ಕೌಸರ ಗಂಜಿಹಾಳ ಮಾತನಾಡಿ, ರೀಲ್ಸ್ಗಳಿಗೆ, ಇನ್ಸಾ್ಟಗ್ರಾಂ ಪೋಸ್ಟ್ಗಳಿಗೆ ಮಾರು ಹೋಗದೇ ಮಕ್ಕಳು ಪಾಲಕರ ಮಾತಿಗೆ ಗೌರವ ನೀಡಬೇಕು ಎಂದರು.
ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ, ಪಿಎಸ್ಐ ಈರಪ್ಪ ರಿತ್ತಿ, ವಕೀಲ ಎ.ಟಿ. ಕಟ್ಟಿಮನಿ, ಸಿಆರ್ಪಿ ಉಮೇಶ್ ನೇಕಾರ, ಎನ್.ಎ. ಮುಲ್ಲಾ, ಪ್ರಗತಿ ತಾವರೆ, ನಂದಾ ಪಶುಪತಿಹಾಳ, ಚೇತನಾ ಹಿರೇಮಠ ಉಪಸ್ಥಿತರಿದ್ದರು.