ಅಧಿಕಾರಿಗಳಿಗೆ ಹಣ ನೀಡುವುದನ್ನು ನಿಲ್ಲಿಸಲಿ

MANVI MERAVANAGI
ಮಾನ್ವಿ ಪಟ್ಟಣದ ಸೂರ್ಯ ಫಂಕ್ಷನ್ ಹಾಲ್‌ನಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕಗೆ ಅದ್ದೂರಿ ಮೆರವಣಿಗೆ ಮಾಡಿ ಕರೆ ತರಲಾಯಿತು.
Published on

ಮಾನ್ವಿ: ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಸೂರ್ಯ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಚಿವ ಎನ್.ಎಸ್.ಬೋಸರಾಜುಗೆ ಬೆಳ್ಳಿಗದೆ ಹಾಗೂ ಶಾಸಕ ಹಂಪಯ್ಯನಾಯಕಗೆ ಬೆಳ್ಳಿಕತ್ತಿ ನೀಡಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅದೇ ರೀತಿ ತಾಪಂ, ಜಿಪಂ ಚುನಾವಣೆ ಗೆಲ್ಲುವುದು ಅತಿ ಮುಖ್ಯವಾಗಿದೆ.

ರಾಜ್ಯದಲ್ಲಿನ ಮಹಿಳೆಯರು ಹಾಗೂ ಯುವಕರು, ರೈತರು ಬದಲಾವಣೆ ಬಯಸಿದ್ದರಿಂದ ನಾವು ಶೇ. 48 ಮತಗಳನ್ನು ರಾಜ್ಯದಲ್ಲಿ ಪಡೆಯಲು ಸಾಧ್ಯವಾಗಿದೆ ಕಳೆದ ಬಾರಿಗಿಂತ ಶೇ. 5ರಷ್ಟು ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗಲು ಜನರ ಸಹಕಾರ ಅಗತ್ಯವಿದೆ. ಯಾವುದೇ ಕೆಲಸ ಬೇಗ ಆಗಲು ಜನರು ಮೊದಲು ಅಧಿಕಾರಿಗಳಿಗೆ ಹಣ ನೀಡುವುದು ಬಿಡಬೇಕು ಎಂದರು.

ಪಟ್ಟಣದ ವಾಲ್ಮೆಕಿ ವೃತ್ತದಿಂದ ಬಸವ ವೃತ್ತ ಮಾರ್ಗವಾಗಿ ರಾಯಚೂರು ರಸ್ತೆಯ ಸೂರ್ಯ ಫಂಕ್ಷನ್ ಹಾಲ್‌ವರೆಗೆ ಸಚಿವ ಎನ್.ಎಸ್.ಬೋಸರಾಜು ಹಾಗೂ ನೂತನ ಶಾಸಕ ಹಂಪಯ್ಯನಾಯಕರನ್ನು ಕಾರ್ಯಕರ್ತರು ಅದ್ದೂರಿಯಾಗಿ ಮೆರವಣಿ ಮೂಲಕ ಕರೆ ತಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ನಗರಸಭೆ ಮಾಜಿ ಸದಸ್ಯ ಜಯಣ್ಣ, ಸಿರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿಸೂಗಪ್ಪ, ಮುಖಂಡರಾದ ಎಂ.ಈರಣ್ಣ, ಶರಣಯ್ಯ ಗುಡದಿನ್ನಿ, ವೀರಭದ್ರಗೌಡ ಅಲ್ದಾಳ್, ಯಂಕನಗೌಡ ಬೊಮ್ಮನಾಳ್, ಬಾಲಸ್ವಾಮಿ ಕೊಡ್ಲಿ, ಶಾಂತಪ್ಪ, ಶಿವಮೂರ್ತಿ ದೊಡ್ಡಬಸಪ್ಪಗೌಡ, ಗಂಗಣ್ಣನಾಯಕ, ಅಮರೇಶಪ್ಪ, ಖಾಲೀದ್ ಖಾದ್ರಿ, ಗುರುನಾಥ, ಸಬ್ಜಲಿಸಾಬ್ ಇತರರಿದ್ದರು.

ಮನೆಯ ಸೇವಕನಾಗಿ ಕೆಲಸ ಮಾಡುವೆ

ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. 5 ವರ್ಷ ನಿಮ್ಮ ಮನೆಯ ಸೇವಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು. ಈ ಹಿಂದೆ ಎರಡು ಬಾರಿ ಶಾಸಕನಾಗಿ ನನ್ನ ರಾಜಕೀಯ ಗುರು ಎನ್.ಎಸ್. ಬೋಸರಾಜು ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಈ ಬಾರಿಯೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಬಹಳಷ್ಟು ಜನ ಹಂಪಯ್ಯ ನಾಯಕ ಸಿಟ್ಟಿನ ಮನುಷ್ಯ ಬರೀ ಬೈಯ್ಯುತ್ತಾನೆ ಎನ್ನುತ್ತಾರೆ. ಆದರೆ ನಾನು ಸುಮ್ಮನೆ ಬೈಯ್ಯುವುದಿಲ್ಲ ತಪ್ಪು ಮಾಡಿದರೆ ಸುಳ್ಳು ಹೇಳಿದರೆ ನನಗೆ ಆಗುವುದಿಲ್ಲ. ಅಧಿಕಾರ ಶಾಶ್ವತವಲ್ಲ ಅಧಿಕಾರ ದುರುಪಯೋಗ ಆಗಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net