

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಭಯಭೀತರಾಗದೆ ಆತ್ಮಸ್ಥೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಹೇಳಿದರು.
ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಡವಿಯ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಾಟಾಗಿದ್ದ 3 ದಿನಗಳ ‘ಯಶೋ ಸಾಧನ’ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗಳು ಮುಂದಿನ ಹಂತದ ಶಿಕ್ಷಣಕ್ಕೆ ದಿಕ್ಸೂಚಿಯಾಗಿವೆ. ಪರೀಕ್ಷೆ ಸಮೀಪಿಸುತ್ತಿದ್ದು ವಿದ್ಯಾರ್ಥಿಗಳು ಅಮೂಲ್ಯವಾದ ಸಮಯ ವ್ಯರ್ಥಮಾಡದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಓದಿನಲ್ಲಿ ತೊಡಗಬೇಕು. ಉತ್ತಮ ಫಲಿತಾಂಶದ ಗುರಿಯೊಂದಿಗೆ ಪರೀಕ್ಷೆಯನ್ನು ಅತ್ಯಂತ ನಿಷ್ಠೆಯಿಂದ ಎದುರಿಸಬೇಕು ಎಂದರು.
ಬಿಸಿಎನ್ ವಿದ್ಯಾಸಂಸ್ಥೆಯ ಲೋಹಿತ ನೆಲವಿಗಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಸಿಕ್ಕಿರುವ ಸಮಯ ಸದ್ಬಳಕೆ ಮಾಡಿಕೊಂಡು ಅಧ್ಯಯನ ಮಾಡಿ ಉನ್ನತ ಸಾಧನೆಗೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ. ಸಾಧನೆ ಎಂದಿಗೂ ಸಾಧಕನ ಸ್ವತ್ತು. ನಿಮ್ಮ ಆರ್ಥಿಕ ಹಿನ್ನೆಲೆ ಏನೇ ಇದ್ದರೂ, ಕಡು ಬಡವರಿದ್ದರೂ ಪ್ರತಿಭೆ, ಪರಿಶ್ರಮದಿಂದ ಸಮಾಜ ತಿರುಗಿ ನೋಡುವಂತಹ ಸಾಧನೆ ಮಾಡಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್.ಸಿ.ಕೆ ಪಾಟೀಲ ಮಾತನಾಡಿ, ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಿಹಳ್ಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಚ್.ಎಂ. ಗುತ್ತಲ, ಸಂಗಮೇಶ ಅಂಗಡಿ, ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ ದೇಶಪಾಂಡೆ, ಎಂ.ಎಸ್. ಮಳಿಮಠ ಇತರರಿದ್ದರು. ಸಂಪನ್ಮೂಲ ಶಿಕ್ಷಕರಾದ ಎಸ್.ಪಿ. ಹಲಸೂರ, ವಿನಾಯಕ ಘೋರ್ಪಡೆ, ಫಕೀರೇಶ ಚಕಾರದ, ಎ.ಎ. ನದಾಫ, ನಾಗರಾಜ ಮಜ್ಜಿಗುಡ್ಡ ಪಾಲ್ಗೊಂಡಿದ್ದರು. ಲಕ್ಷ್ಮೇಶ್ವರ ಭಾಗದ 40 ಪ್ರೌಢಶಾಲೆಗಳ 135 ವಿದ್ಯಾರ್ಥಿಗಳು, ವಿವಿಧ ಶಾಲೆಗಳ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಿಆರ್‌ಪಿ ಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಮಂಜುನಾಥ ಬಂಡಿವಾಡ ನಿರ್ವಹಿಸಿದರು.