

ವಿಜಯವಾಣಿ ಸುದ್ದಿಜಾಲ ತಿಪಟೂರು
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಹಾಕಿ ಸಮಾಜದಲ್ಲಿ ಸೌಹಾರ್ದ ಕದಡುವ ವಿಕೃತ ವ್ಯಕ್ತಿಗಳು ಮತ್ತು ಜಾಲತಾಣಗಳಲ್ಲಿ ನ್ಯಾಯಾಧೀಶರಂತೆ ತೀರ್ಪು ನೀಡುವಷ್ಟರ ಮಟ್ಟಿಗೆ ಬೆಳೆದಿರುವ ನಕಲಿ ಪತ್ರಿಕೋದ್ಯಮವನ್ನು ಮಟ್ಟ ಹಾಕುವ ದಿನ ದೂರವಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ ಎಚ್ಚರಿಸಿದರು.
ನಗರದ ಎಸ್.ಎನ್.ಕನ್ವೆಷನ್ ಹಾಲ್ನಲ್ಲಿ ಸೋಮವಾರ ಕಾರ್ಯನಿರತ ಪರ್ತಕರ್ತರು ಮತ್ತು ಕಲಾಕೃತಿ ಪ್ರಧಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 78ನೇ ರಾಷ್ಟ್ರೀಯ ಮಂಡಳಿ ಸಭೆ ಹಾಗೂ ವಿಚಾರ ಸಂಕಿರಣ, ಅಂಚೆಚೀಟಿ ಪ್ರದರ್ಶನ ಮತ್ತು ತೆಂಗು ಉತ್ಪನ್ನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದುವ ಮಾಧ್ಯಮ ಕ್ಷೇತ್ರಕ್ಕೆ ಸಂವಿಧಾನದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ದೇಶದ ನಾಲ್ಕನೇ ಆಧಾರಸ್ತಂಭವಾಗಿ ಗುರುತಿಸಲಾಗಿದೆ. ಆದರೆ, ಸಮಾಜವನ್ನು ತಿದ್ದಬೇಕಾದ ಮಾಧ್ಯಮ ಕ್ಷೇತ್ರ ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿ ಕ್ಷೇತ್ರ ಕಲುಷಿತಗೊಂಡಿದೆ ಎಂದರು.
ಸಮಾಜದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಗೆ ಸಹಕರಿಸಬೇಕಾದ ಮಾಧ್ಯಮ ಶುದ್ಧತೆ, ಬದ್ಧತೆ ಕಳೆದುಕೊಂಡಿದೆ. ಸತ್ಯಕ್ಕೆ ದೂರವಾದ ವಿಚಾರ ಪ್ರಕಟಿಸುವ ಮೂಲಕ ಕೆಲ ಯೂಟ್ಯೂಬರ್ಗಳು ನ್ಯಾಯಾಧೀಶರು ಮತ್ತು ನ್ಯಾಯಾಲಯಗಳಲ್ಲಿ ನೀಡಬೇಕಾದ ತೀರ್ಪು ನೀಡುವಷ್ಟು ಮಟ್ಟಿಗೆ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕೋದ್ಯಮದ ಸಂಘ, ಸಂಸ್ಥೆಗಳು ನಡೆಸುವ ವಿಚಾರ&ಸಂಕಿರಣಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ನಕಲಿ ಮತ್ತು ಸಮಾಜಕ್ಕೆ ಹಾನಿ ಉಂಟುಮಾಡುವ ಪತ್ರಿಕೋದ್ಯಮವನ್ನು ಗಂಭೀರವಾಗಿ ಎಚ್ಚರಿಸುವ ಕಾರ್ಯವಾಗಬೇಕಿದೆ ಎಂದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ತಿಪಟೂರು ತಾಲೂಕಿನ ಕೃಷಿ ಮತ್ತು ರೈತರ ಬೆನ್ನೆಲುಬು ತೆಂಗಿನ ಉತ್ಪನ್ನ. ಇದನ್ನು ರಾಷ್ಟ್ರವ್ಯಾಪಿ ಪ್ರಚಾರ ಮಾಡುವ ಮೂಲಕ ಇಲ್ಲಿನ ರೈತರ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಂಡಳಿ ಸಭೆಯನ್ನು ತಿಪಟೂರಿನಲ್ಲಿ ಆಯೋಜಿಸಲಾಗಿದೆ ಎಂದರು.
ನಕಲಿ ಯೂಟ್ಯೂಬ್ ಮತ್ತು ಪತ್ರಿಕೋದ್ಯಮವನ್ನು ಹಣ ವಸೂಲಿಯ ದಂಧೆಯನ್ನಾಗಿಸಿಕೊಂಡಿದ್ದು, ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪ್ರತ್ಯೆಕ ಕಾನೂನು, ಸೂಕ್ತ ಕ್ರಮ ವಹಿಸುವ ಅಗತ್ಯವಿದೆ ಎಂದರು.
ಕಲಾಕೃತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್ ಮಾತನಾಡಿ, ತಾಲೂಕಿನಲ್ಲಿ ತೆಂಗು ಬೆಳೆಯುವ ರೈತರು ಸೂಕ್ತ ದರ ಸಿಗದೆ ಪರಿತಪಿಸುತ್ತಿರುವ ಬಗ್ಗೆ ದೇಶದ ಗಮನ ಸೆಳೆಯಲು ಸಭೆ ಆಯೋಜಿಸಲಾಗಿದೆ. ಉತ್ತರ ಭಾರತದಲ್ಲಿ ಇಲ್ಲಿನ ತೆಂಗಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಕಾರ್ಯಕ್ರಮದ ಉದ್ದೇಶ. ದೇಶದ ಮೂಲೆ, ಮೂಲೆಗಳಿಂದ ಬಂದಿರುವ ಪರ್ತಕರ್ತರು ತೆಂಗು ಬೆಳೆಯ ಉಪಯುಕ್ತತೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಮಾಡಬೇಕಿದೆ ಎಂದರು. ಭಾರತೀಯ ಕಾರ್ಯನಿತರ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷ ಹೇಮಂತ್ ತಿವಾರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮದನಗೌಡ, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಕಲಾಕೃತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿಗಣೇಶ್, ಉಪಾಧ್ಯಕ್ಷ ಕೆ.ಎಂ.ರಾಜಣ್ಣ. ಎ.ಟಿ.ಪ್ರಸಾದ್ ಇತರರು ಇದ್ದರು.
ಗಮನಸೆಳೆದ ಅಂಚೆಚೀಟಿ, ನಾಣ್ಯ: ಅಪರೂಪದ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹದ ವಸ್ತುಪ್ರದರ್ಶನವನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು. ರೈತರ ಕೃಷಿ ಉತ್ಪನ್ನಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ದೂರದ ಜಾರ್ಖಂಡ್, ಅಸ್ಸಾಂ, ಗುಜರಾತ್, ತಮಿಳುನಾಡು, ಆಂಧ್ರ ಸೇರಿ ದೇಶದ ವಿವಿಧೆಡೆಯಿಂದ ಪತ್ರಕರ್ತರು ಮತ್ತು ಆಯಾ ರಾಜ್ಯದ ಸಂಘಗಳ ಮುಖ್ಯಸ್ಥರು ಆಗಮಿಸಿದ್ದರು. ಅತಿಥಿಗಳಿಗೆ ಡಾ.ಜಿ.ಎಸ್.ಶ್ರೀಧರ್, ತೆಂಗು ಉತ್ಪನ್ನಗಳಿಂದ ತಯಾರಿಸಿದ ವಿವಿಧ ಬಗೆಯ ಭಕ್ಷ$್ಯ, ಭೋಜನದ ವ್ಯವಸ್ಥೆ ಕಲ್ಪಿಸಿದ್ದರು. ಕೃತಕ ಬುದ್ಧಿಮತ್ತೆ(ಎಐ)ಮತ್ತು ಪರಿಣಾಮ ಹಾಗೂ ಸಣ್ಣ ಪತ್ರಿಕೆಗಳ ಇಂದಿನ ಸವಾಲುಗಳ ಕುರಿತ ವಿಚಾರ ಸಂಕಿರಣ, ತಿಪಟೂರು ಉಂಡೆ ಕೊಬ್ಬರಿ ಮಾರುಕಟ್ಟೆ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳು ಕುರಿತ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಸಂವಾದಕ್ಕೆ ಅಧಿಕಾರಿಗಳ ಗೈರು: 78ನೇ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಆಯೋಜಿಸಿದ್ದ ಉಂಡೆ ಕೊಬ್ಬರಿ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಗೈರಾಗಿರುವುದಕ್ಕೆ ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಸಂವಾದಲ್ಲಿ ತೆಂಗು ಬೆಳೆ ಮತ್ತು ಮಾರುಕಟ್ಟೆ ಸೇರಿ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಕೇಂದ್ರ ನಿಗಸಿಪಡಿಸಿರುವ ಕ್ವಿಂಟಲ್ ಕೊಬ್ಬರಿಗೆ 12 ಸಾವಿರ, ರಾಜ್ಯ ಸರ್ಕಾರ ನಿಗದಿಪಡಿಸಿರುವ ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರದ ಮಧ್ಯೆ 6 ಸಾವಿರದ ವ್ಯತ್ಯಾಸ ಏಕೆ ಮತ್ತು ಹೇಗೆ ಎಂಬ ಪ್ರಶ್ನೆಗಳು ರೈತರಲ್ಲಿ ಮೂಡಿದರೂ ಉತ್ತರಿಸಲು ಅಧಿಕಾರಿಗಳಿಲ್ಲದ ಕಾರಣ ಯಾವುದೇ ಸ್ಪಷ್ಟನೆ ಸಿಗದಂತಾಯಿತು.
ತುಮಕೂರಿನಲ್ಲಿ ಕಾನಿಪ ರಾಜ್ಯ ಸಮ್ಮೇಳನ: ಕಲ್ಪಶ್ರೀ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮುಖ್ಯಮಂತ್ರಿ ಗಾದಿಯ ಹತ್ತಿರಕ್ಕೆ ಹೋಗಿ ಅವಕಾಶ ವಂಚಿತರಾದರೂ ತಾಳ್ಮೆ, ಸಹನೆ, ಕಳೆದುಕೊಳ್ಳದೆ ಸಮಾಜಮುಖಿ ಕಾರ್ಯಗಳ ಜತೆಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದರು. ಮುಂದಿನ ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನ ತುಮಕೂರಿನಲ್ಲಿಯೇ ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು, ಕೆಟ್ಟ ಮತ್ತು ಅಶ್ಲೀಲ ಪೋಸ್ಟ್ಗಳನ್ನು ಹಾಕಿ ಸಮಾಜದ ಶಾಂತಿ, ಸುವ್ಯವಸ್ಥೆ ಕದಡುವವರು ಹೆಚ್ಚು ದಿನ ಕಾನೂನು ಕುಣಿಕೆಯಿಂದ ಬಚಾವ್ ಆಗಲು ಸಾಧ್ಯವಿಲ್ಲ. ನಮ್ಮ ಸೈಬರ್ ಕೆಂ ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.| ಜಿ.ಪರಮೇಶ್ವರ ಗೃಹ ಸಚಿವ