

ಮಡಿಕೇರಿ: ರಾಜಕೀಯ ಯಜಮಾನರಿಗೆ ಕೊಡವರು ಊಳಿಗಮಾನ್ಯ ನಿಷ್ಠೆಯನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಕರೆ ನೀಡಿದ್ದಾರೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಂದಿನೆರವಂಡ ಒಕ್ಕದ ವತಿಯಿಂದ ಸನ್ಮಾನ ಸ್ವೀಕರಿಸಿದ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಸಂವಿಧಾನವು ಅದರ ನಾಗರಿಕರನ್ನು ಆಳುವ ಅತ್ಯುನ್ನತ ದಾಖಲೆಯಾಗಿದೆ. ಈ ಘನವೆತ್ತ ಸಂವಿಧಾನದಡಿಯಲ್ಲಿ ಸೂಕ್ಷ್ಮಾತೀಸೂಕ್ಷ್ಮ ಕೊಡವರ ಹೆಗ್ಗುರುತು ರಕ್ಷಿಸುವ ಸಲುವಾಗಿ ಕೊಡವಲ್ಯಾಂಡ್ ಸಾಧಿಸುವ ಮೂಲಕ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಶ್ರಮಿಸೋಣ ಎಂದರು.
ಕೊಡವರ ಪರ ಹೋರಾಟ ಕಠಿಣ ಕಾರ್ಯವಾಗಿದೆ. ಸರ್ಕಾರ ಮತ್ತು ಕೊಡವ ವಿರೋಧಿ ಅಂಶಗಳಿಂದ ಹಗೆತನವನ್ನು ಅನುಭವಿಸುತ್ತಿದ್ದೇವೆ. ೩೪ ವರ್ಷಗಳ ನಿರಂತರ ಹೋರಾಟ ಕಹಿ ಸಿಹಿ ಅನುಭವದ ಸುದೀರ್ಘ ಪ್ರಯಾಣವಾಗಿದೆ. ದುಃಖವಿಲ್ಲದೆ ಗೆಲುವಿಲ್ಲ, ತ್ಯಾಗವಿಲ್ಲದೆ ಸ್ವಾತಂತ್ರ್ಯವಿಲ್ಲ ಎಂದರು.
ನಾವು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ನಾವು ಹೊಸ ಇತಿಹಾಸವನ್ನು ರಚಿಸಬಹುದು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವೇ ಇಲ್ಲ. ನಾವು ಕೊಡವರು ಈ ನೆಲದ ಆದಿಮಸಂಜಾತ ಮೂಲ ಬುಡಕಟ್ಟು ಜನಾಂಗ. ಈ ನೆಲದ ಸೃಷ್ಟಿಯ ಆರಂಭದಿಂದಲೂ ನಾವು ಇಲ್ಲಿಯೇ ಇದ್ದೇವೆ. ಮಾನವ ಜನಾಂಗದ ಉತ್ಪತ್ತಿಯಾದಗಿನಿಂದಲೂ ಕೊಡವ ಕುಲ ಇಲ್ಲಿ ಅರಳಿ ವಿಕಾಸಗೊಂಡಿದೆ ಎಂದು ವಿವರಿಸಿದರು.
ಭಾರತವು ಅತಿದೊಡ್ಡ ಜನಾಂಗೀಯ ವೈವಿಧ್ಯತೆಯನ್ನು ಹೊಂದಿದೆ. ಹಾಗೆಯೇ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ಯಾರೂ ಯಜಮಾನರಲ್ಲ ಮತ್ತು ಯಾರೂ ಗುಲಾಮರಲ್ಲ. ರಾಜಕೀಯ ಯಜಮಾನರಿಗೆ ಊಳಿಗಮಾನ್ಯ ನಿಷ್ಠೆಯನ್ನು ಕೊಡವರು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು. ಇದು ನಮ್ಮನ್ನು ಭಿಕ್ಷಾಟನೆ ಮತ್ತು ಗುಲಾಮಗಿರಿಗೆ ಕೊಂಡೊಯ್ಯುತ್ತದೆ. ನಮ್ಮ ಊಳಿಗಮಾನ್ಯ ನಿಷ್ಠೆಗಾಗಿ ಮುಂದೆ ಭಾರೀ ಬೆಲೆಯನ್ನೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂದಿನೆರವಂಡ ಒಕ್ಕದ ಅಧ್ಯಕ್ಷ ದಿನೇಶ್, ಕುಲದ ಹಿರಿಯ ಸದಸ್ಯರಾದ ಪಾಲಿ ಗಣೇಶ್, ಸೀತಾ ಸೋಮಯ್ಯ, ಶಾಂತಿ ಗಣಪತಿ, ಹಿರಿಯರಾದ ಅಪ್ಪಯ್ಯ, ಗಣೇಶ್ ಚೀಯಣ್ಣ, ರವಿ ಬಸಪ್ಪ, ಇತರರು ಈ ಸಂದರ್ಭ ಉಪಸ್ಥಿತರಿದ್ದರು.