

ಹೊಸಕೋಟೆ / ಬೆಂ.ಗ್ರಾಮಾಂತರ: ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಕಾಳುಗಳಲ್ಲಿ ಕಸಕಡ್ಡಿ ಸೇರಿಕೊಂಡಿದೆ. ಇಂಥ ಕಾಳುಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಸೂಚನೆ ನೀಡಿದ್ದಾರೆ.
ನಗರದ ಟಿಎಪಿಸಿಎಂಎಸ್ ಆಹಾರ ಧಾನ್ಯ ಸಗಟು ಗೋದಾಮಿಗೆ ಶುಕ್ರವಾರ ಭೇಟಿ ನೀಡಿದ ವೇಳೆ ಗ್ರಾಹಕರಿಗೆ ವಿತರಿಸಲು ದಾಸ್ತಾನು ಮಾಡಿದ್ದ ಕಡಲೆ ಕಾಳಿನ ಮೂಟೆಯಲ್ಲಿ ಕಸಕಡ್ಡಿ ಕಂಡುಬಂದ ಹಿನ್ನೆಲೆಯಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ ಅವರಿಗೆ ಆದೇಶಿಸಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಗಟು ಗೋದಾಮುಗಳಿಗೆ ಸಾಗಿಸಿರುವ ಆಹಾರ ಧಾನ್ಯಗಳಲ್ಲಿ ಕಳಪೆ ಬೇಳೆ ಕಾಳುಗಳು ಸರಬರಾಜಾಗಿರುವ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಗುಣಮಟ್ಟವಿಲ್ಲದ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೆಯೇ ಗುಣಮಟ್ಟವಿಲ್ಲದ ಕಾಳುಗಳನ್ನು ವಾಪಸ್ ಪಡೆದು ಗುಣಮಟ್ಟದ ಬೇಳೆ ಕಾಳು ಪೂರೈಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಕಾಳು ಹೊರತುಪಡಿಸಿ ಉಳಿದೆಲ್ಲ ಪಡಿತರ ಗುಣಮಟ್ಟದ್ದಾಗಿದೆ. ಹೊಸಕೋಟೆ ಟಿಎಪಿಸಿಎಂಎಸ್ ಗೋದಾಮು ನಿರ್ವಹಣೆ ಉತ್ತಮವಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಉಪ್ಪಾರಳ್ಳಿ ಮುನಿಯಪ್ಪ, ಬಾಬು ರೆಡ್ಡಿ, ಟಿಎಪಿಸಿಎಂಎಸ್ ಸಿಬ್ಬಂದಿಸೋಮಶೇಖರ್, ಗೋದಾಮು ಮೇಲ್ವಿಚಾರಕ ದೇವರಾಜ್ ಮತ್ತಿತರರು ಇದ್ದರು.
ಎಲ್ಲ ಪಡಿತರಗಳ ಖುದ್ದು ಪರಿಶೀಲನೆ: ಗೋದಾಮಿಗೆ ದಿಢೀರ್ ಭೇಟಿ ನೀಡಿದ ಸಚಿವರು ಅಕ್ಕಿ, ಗೋಧಿ, ತೊಗರಿಬೇಳೆ ಮತ್ತು ಕಡಲೆಕಾಳುಗಳ ಮೂಟೆಗಳನ್ನು ಖುದ್ದು ಬಿಚ್ಚಿ ಪರಿಶೀಲನೆ ನಡೆಸಿದರು. ಈ ವೇಳೆ ಕಡಲೆಕಾಳು ಮೂಟೆಗಳಲ್ಲಿ ಹೆಚ್ಚಿನ ಕಸಕಟ್ಟಿ ಕಂಡುಬಂದಿತ್ತು. ಈ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಇಂಥ ಪಡಿತರ ವಿತರಣೆಗೂ ಮುನ್ನ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಸಚಿವರ ಸಂಚಾರ: ಗ್ರಾಮಾಂತರ ಜಿಲ್ಲೆಯಲ್ಲಿ ಸಚಿವ ಗೋಪಾಲಯ್ಯ ಅವರ ದಿಢೀರ್ ಭೇಟಿ ಮುಂದುವರೆದಿದೆ. ಸ್ಥಳೀಯ ಅಧಿಕಾರಿಗಳಿಗೂ ಮಾಹಿತಿ ಇಲ್ಲದಂತೆ ಖುದ್ದು ಪಡಿತರ ಗೋದಾಮು, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದರಿಂದ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯೋಜನೆಯಡಿ ಮುಂಗಡ ಪಡಿತರ ವಿತರಣೆಯಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್‌ದಾರರ ಜತೆಗೆ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಆಧಾರ್ ಕಾರ್ಡ್ ಮಾನದಂಡದಲ್ಲಿ ಪಡಿತರ ವಿತರಣೆಯಾಗುತ್ತಿದೆ. ಎಲ್ಲಿಯೂ ಪಡಿತರ ವಿತರಣೆಯಲ್ಲಿ ಲೋಪವಾಗಬಾರದು ಎಂಬ ಕಾರಣಕ್ಕೆ ಖುದ್ದು ಪರಿಶೀಲನೆ ನಡೆಸುತ್ತಿರುವುದಾಗಿ ಸಚಿವ ಗೋಪಾಲಯ್ಯ ತಿಳಿಸಿದರು.
ಸ್ಥಳೀಯ ಗೋದಾಮಿಗೆ ಬರುವ ಮುನ್ನವೇ ಶೇ.83 ಸ್ವಚ್ಛಗೊಳಿಸಿ ಸರಬರಾಜು ಮಾಡಬೇಕು. ಈ ನಿಯಮ ಉಲ್ಲಂಸಲಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದ್ದು, ಕಾಳುಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ