

ಕುಮಟಾ: ಗಾರೆ ಕೆಲಸ ಮಾಡಲು ಬಂದವರು ಮದ್ಯದ ಅಮಲಿನಲ್ಲಿ ಜಗಳವಾಡಿಕೊಂಡು ಜತೆಯಲ್ಲಿದ್ದ ವ್ಯಕ್ತಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಪಟ್ಟಣದ ತಾಲೂಕಾಸ್ಪತ್ರೆ ಸಿಬ್ಬಂದಿ ವಸತಿ ಗೃಹದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಆನಂದನಗರ ನಿವಾಸಿ ಇಮ್ತಿಯಾಜ್ ಕಲಂಧರ ರಾಯಭಾಗ (34) ಕೊಲೆಯಾದವ.
ಹುಬ್ಬಳ್ಳಿ ಆನಂದನಗರದ ಮುನಿಯಪ್ಪ ಶೇಖಪ್ಪ ದಾವಣಗೆರೆ (50) ಹಾಗೂ ಹಳೇಹುಬ್ಬಳ್ಳಿ ಇಂಡಿಯನ್ ಹೈಸ್ಕೂಲ್ ಸನಿಹದ ನಿವಾಸಿ ಸಾಧಿಕ್ ಬಾಬಾಜಾನ್ ನಾಯ್ಕೋಡಿ (25) ಕೊಲೆ ಆರೋಪಿಗಳು.
ಪಟ್ಟಣದ ಬಗ್ಗೋಣ ಕ್ರಾಸ್ ಸನಿಹದ ತಾಲೂಕಾಸ್ಪತ್ರೆಯಲ್ಲಿ ದುರಸ್ತಿ ಕಾರ್ಯದ ಗಾರೆ ಕೆಲಸಕ್ಕಾಗಿ ಆಗಮಿಸಿದ್ದ ನಾಲ್ವರು ಕಳೆದ ಒಂದು ತಿಂಗಳಿಂದ ನರ್ಸ್ ಸಿಬ್ಬಂದಿ ಖಾಲಿ ವಸತಿಗೃಹದಲ್ಲಿ ತಂಗಿದ್ದರು. ಭಾನುವಾರ ರಾತ್ರಿ ಊಟ ಮುಗಿಸಿದ್ದ ನಾಲ್ವರ ಪೈಕಿ ಮಂಜುನಾಥ ಬಸಪ್ಪ ಎಂಬುವವ ಮಲಗಿದ್ದ. ಉಳಿದ ಮೂವರಲ್ಲಿ ತಡರಾತ್ರಿ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ಸಾಧಿಕ್ ಮತ್ತು ಮುನಿಯಪ್ಪ ಸೇರಿ ಇಮ್ತಿಯಾಜ್ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗ್ಗೆ ಎದ್ದಾಗ ಕೊಲೆ ನಡೆದಿರುವುದನ್ನು ಗಮನಿಸಿದ ಮಂಜುನಾಥ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತನಿಖೆ ನಡೆದಿದೆ.