ಕಲ್ಲು ತೂರಾಟ ಪೂರ್ವನಿಯೋಜಿತ: ಈಶ್ವರಪ್ಪ

Eshwarappa
Published on

ಶಿವಮೊಗ್ಗ: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ನಡೆದಿರುವುದು ರಾಜ್ಯವೇ ತಲೆತಗ್ಗಿಸುವಂಥದ್ದು. ಪೊಲೀಸರು ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಾರೆ. ಪೊಲೀಸರ ಮೇಲೆಯೇ ಸಾವಿರಾರು ಜನರು ಕಲ್ಲು ತೂರಾಟ ನಡೆಸುತ್ತಾರೆ. ಏಕಾಏಕಿ ಇಷ್ಟೊಂದು ಜನ ಒಂದೆಡೆ ಸೇರಿದ್ದು ಹೇಗೆ? ಅಷ್ಟೊಂದು ಕಲ್ಲುಗಳನ್ನು ಎಲ್ಲಿ ಸಂಗ್ರಹಿಸಲಾಗಿತ್ತು? ಇದೊಂದು ಪೂರ್ವ ನಿಯೋಜಿತ ಕೃತ್ಯವಲ್ಲವೇ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್, ಲಕ್ಷ್ಮಣ್ ಹೇಳಿಕೆಗಳು ತೀರ ಬಾಲಿಶ. ಇಲ್ಲಿ ಗಲಾಟೆ ಮಾಡಿದವರು ಬಿಜೆಪಿಯವರು. ಪ್ರಕರಣದಲ್ಲಿ ಆರ್‌ಎಸ್‌ಎಸ್ ಪಾತ್ರವಿದೆ ಇದೆ ಎಂದು ಸುಳ್ಳು ಹೇಳಿದ್ದಾರೆ. ಇವರಿಗೆ ಮಾನ, ಮಾರ್ಯಾದೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಫೋನ್‌ನಲ್ಲಿ ಅಶ್ಲೀಲವಾಗಿ ಬೈಯ್ಯಲಾಗುತ್ತದೆ. ಆದರೆ ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳು ಹೆದರುತ್ತಾರೆ. ಇಲ್ಲಿ ಪ್ರಜಾಪ್ರಭುತ್ವವಿದೆಯೇ? ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net