ದೇವರ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಪಾಕಿಸ್ತಾನ ಪರ ಘೋಷಣೆಗೆ ಹಿಂದು ಪರ ಸಂಘಟನೆಗಳ ಆಕ್ರೋಶ

IMG_20250911_234709.jpg
Published on

ಚಿಕ್ಕಬಳ್ಳಾಪುರ:ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ನಡೆದಿರುವ ಕಲ್ಲು ತೂರಾಟ ಹಾಗೂ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ, ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿ ಹಿಂದು ಪರ ಸಂಘಟನೆಗಳು ಗುರುವಾರ ಪ್ರತಿಭಟಿಸಿದವು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿ,ಪ್ರತಿಭಟನಾಕಾರರು ಧಿಕ್ಕಾದ ಘೋಷಣೆಗಳನ್ನು ಕೂಗಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  

ಮುಖಂಡ ಸೀಕಲ್ ಆನಂದ್‌ಗೌಡ ಮಾತನಾಡಿ, ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯು ಮಸೀದಿ ಮುಂದೆ ಸಾಗುವ ವೇಳೆ ವಿದ್ಯುತ್ ಕಡಿತಗೊಳಿಸಿ ಕಲ್ಲು ತೂರಾಟ ನಡೆಸಿರುವುದು ಪೂರ್ವ ಯೋಜಿತ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರವು ಹಿಂದು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ದೇವಾಲಯದ ಅಭಿವೃದ್ಧಿಗೆ ಅಗತ್ಯ ಸವಲತ್ತುಗಳನ್ನು ನೀಡುತ್ತಿಲ್ಲ. ಆದರೆ, ಮಸೀದಿಗಳಿಗೆ ಮಾತ್ರ ಸಾಕಷ್ಟು ನೆರವು ಒದಗಿಸುತ್ತಿದೆ ಎಂದರು.

ಬಜರಂಗದಳ ಸಂಯೋಜಕ ಅಮರೇಶ್ ಮಾತನಾಡಿ, ಹಿಂದು ದೇವಾಲಯ ಮತ್ತು ದೇವರ ಮೂರ್ತಿಗಳ ಮೇಲೆ ಕಲ್ಲು ತೂರಾಟ ಸೇರಿದಂತೆ ಸಮಾಜಘಾತುಕ ಕೃತ್ಯಗಳನ್ನು ನಡೆಸಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ಎಚ್.ಆಶ್ವಿನ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಅಭಿಷೇಕ್, ಬಾಲು, ನರೇಶ್, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣಗುಪ್ತ, ಮಧು, ಅಶೋಕ್, ಶಿವು, ವಿಶ್ವ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net