

ವಿಜಯಪುರ: ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಅನ್ಯಕೋಮಿನ ಯುವಕರು ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಲಾಂಗು ಹಿಡಿದು ಮಸೀದಿಯ ಮುಂದೆ ಮೆರವಣಿಗೆ ಹೋಗಬಾರದು ಎಂದು ಈ ರೀತಿ ಬೆಂಕಿ ಹಚ್ಜಿ ಮೆರವಣಿಗೆಗೆ ಅಡ್ಡಿ ಪಡಿಸಿದ್ದಲ್ಲದೆ, ಯಾರಿಗೂ ತೊಂದರೆ ಕೊಡದೆ ಹೋಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಕ್ರೌರ್ಯ, ಅಶಾಂತಿ ಮೆರೆದಿದ್ದು ಇವರ ಅಸಹನೆ, ಜಿಹಾದಿ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ.
ಮೆರವಣಿಗೆ ಹೋಗುವ ಸ್ಥಳದಲ್ಲಿ ಭದ್ರತೆ ಕಲ್ಪಿಸಲು ವಿಫಲರಾದ ಪೊಲೀಸರು ದೋಷಿಗಳು. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಹೋಗುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಜಿಲ್ಲಾಡಳಿತವಾಗಲಿ, ಪೊಲೀಸರಾಗಲಿ ಗಮನ ಹರಿಸದೇ ಇರುವುದು ಈ ಹಿಂಸೆಗೆ ಕಾರಣ.
ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಿ ಹಾಗೂ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಸ್‌ಐಟಿ ರಚನೆ ಆಗಬೇಕು ಹಾಗೂ ಈ ಕೂಡಲೇ ಕರ್ತವ್ಯಲೋಪವೆಸಗಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಪೊಲೀಸರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ದುಷ್ಕರ್ಮಿಗಳಿಂದಲೇ ಹಾನಿಯಾದ ವೆಚ್ಚವನ್ನು ಪಡೆಯಬೇಕು ಹಾಗೂ ಸರ್ಕಾರ ನೀಡಿರುವ ಎಲ್ಲ ಸವಲತ್ತುಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವಾಪಸ್ ಪಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಸಂಜು ಐಹೊಳ್ಳಿ ಮತ್ತಿತರರು ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.