ಮಲ್ಪೆ-ಮೊಳಕಾಲ್ಮೂರು ಹೆದ್ದಾರಿ ಗುಂಡಿಗೆ ಕಲ್ಲು, ಮಣ್ಣಿನ ತೇಪೆ

Jagaluru, Highway, Gundi, Tepe,
Published on

ಜಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗೆ ಲೋಕೋಪಯೋಗಿ ಇಲಾಖೆ ದುಂಡು ಕಲ್ಲು, ಕೆಂಪು ಮಣ್ಣಿನ ತೇಪೆ ಹಚ್ಚಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕೆರೆ ಬಳಿ ದೊಡ್ಡ ಗುಂಡಿಗಳು ಬಿದ್ದಿದ್ದು, ಅವುಗಳನ್ನು ಭರ್ತಿ ಮಾಡಲು ನಿಯಮಗಳ ಅನುಸಾರ ಕಾಂಕ್ರಿಟ್ ಮತ್ತು ಜಲ್ಲಿ ಕಲ್ಲು ಬಳಸಬೇಕು. ಇಲ್ಲವೇ ಡಾಂಬರ್, ಜಲ್ಲಿಕಲ್ಲು ಹಾಕಬೇಕು. ಆದರೆ, ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ಗುಡ್ಡದ ಮಣ್ಣು ಮತ್ತು ದೊಡ್ಡ ದುಂಡಿ ಕಲ್ಲು ಹಾಕುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಗುಂಡಿಗಳಿಗೆ ಕೆಂಪುಮಣ್ಣು ಹಾಕಿರುವುದರಿಂದ ವಾಹನ ಸವಾರರು ಹರಸಾಹಸಪಡುವಂತಾಗಿದೆ. ದೊಡ್ಡ ಕಲ್ಲು, ಕೆಂಪು ಮಣ್ಣು ಚಿಮ್ಮಿ ವಾಹನ, ಬೈಕ್ ಸವಾರರಿಗೆ ಓಕುಳಿ ಎರಚಿದಂತಾಗುತ್ತಿದೆ.

ವಾಹನಗಳು ವೇಗವಾಗಿ ಬಂದರೆ ಕಲ್ಲು ದುಂಡಿಗಳು ಅಡ್ಡಬಂದು ಪ್ರಾಣಕ್ಕೆ ಆಪತ್ತು ತರುವ ಸಂಭವವಿದೆ. ಆದ್ದರಿಂದ ಗುಂಡಿಗಳಿಗೆ ಹಾಕಿರುವ ದುಂಡಿ, ಕಲ್ಲು ತೆರವುಗೊಳಿಸಿ, ಕಾಂಕ್ರಿಟ್‌ನಿಂದ ಭರ್ತಿ ಮಾಡಬೇಕು. ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ವಾಹನ ಸವಾರರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net