ಗೋವಾದಲ್ಲಿ 10ನೇ ಶತಮಾನದ ಗಜಲಕ್ಷ್ಮೀದೇವಿಯ ಶಿಲ್ಪ ಪತ್ತೆ

Lakshmi
Published on

ಅಧ್ಯಯನ ನಡೆಸಿದ ಪ್ರೊ. ಟಿ.ಮುರುಗೇಶಿ

ವೈಷ್ಣವ ಸಂಪ್ರದಾಯದ ಅಪರೂಪದ ಪ್ರತಿಮೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಗೋವಾ ರಾಜ್ಯದ ಪಯೆರ್ ಸಮೀಪದ ವಲವಂತಿ ನದಿಯಲ್ಲಿ ಇತ್ತೀಚೆಗೆ ಪುರಾತನ ಕಾಲದ ಗಜಲಕ್ಷ್ಮೀ ದೇವಿಯ ಶಿಲ್ಪ ಪತ್ತೆಯಾಗಿದ್ದು, ಇತಿಹಾಸ ತಜ್ಞ ಉಡುಪಿಯ ಪ್ರೊ. ಟಿ.ಮುರುಗೇಶಿ ಅವರು ಅಧ್ಯಯನ ನಡೆಸಿದ್ದಾರೆ.

ನದಿಯಲ್ಲಿ ಪತ್ತೆಯಾದ ದೇವಿಯ ವಿಗ್ರಹ ರಕ್ಷಿಸಿದ್ದ ಆದಿಮ ಕಲಾ ಕ್ಷೇತ್ರದ ಅಧ್ಯಕ್ಷ ಗೋವಾದ ಡಾ. ರಾಜೇಂದ್ರ ಕೇರ್ಕರ್​ ಅವರ ಮನವಿಯಂತೆ ಸಂಶೋಧನಾತ್ಮಕ ಅಧ್ಯಯನ ನಡೆಸಿ ವಿಗ್ರಹದ ಚಾರಿತ್ರಿಕ ಮಹತ್ವದ ವರದಿ ನೀಡಿದ್ದಾರೆ.

ದೈವೀಕಳೆಯ ವರ್ಚಸ್ಸು

ಉನ್ನತ ಪದ್ಮಪಿಠದ ಮೇಲೆ ಅಭಯ ಮತ್ತು ವರದ ಹಸ್ತೆಯಾಗಿ ಲಕ್ಷ್ಮೀ ಕುಳಿತ ಭಂಗಿಯಲ್ಲಿದ್ದಾಳೆ. ಹಿಂದಿನ ಬಲಗೈ ಮತ್ತು ಎಡಗೈ ಎರಡಲ್ಲೂ ಕಮಲದ ಮೊಗ್ಗು ಹಿಡಿದಿದ್ದಾಳೆ. ಕಿವಿಯಲ್ಲಿ ಮಕರಕುಂಡಲವಿದ್ದು, ಆಕರ್ಷಕ ಕರಂಡಮುಕುಟ ಧರಿಸಿದ್ದು, ಮುಖದಲ್ಲಿ ದೈವೀಕಳೆಯ ವರ್ಚಸ್ಸು ಕಾಣಿಸುತ್ತಿದೆ. ದೇವಿಯ ಹಿಂಭಾಗದಲ್ಲಿ ಅಂಡಾಕಾರದ ಪ್ರಭಾವಳಿಯಿದ್ದು, ಮಧ್ಯದಲ್ಲಿ ಸಿಂಹದ ಲಲಾಟ ಬಿಂಬವಿದೆ. ಕಂಠೀಹಾರ, ಕೊರಳಹಾರ, ಕೇಯೂರ ಮುಂತಾದ ಆಭರಣಗಳಿಂದ ಅಲಂಕೃತವಾಗಿದೆ.

50 ಸೆಂ.ಮೀ. ಎತ್ತರ, 61 ಸೆಂ.ಮೀ. ಅಗಲವಾಗಿರುವ ದೇವಿಯ ಎಡ-ಬಲಗಳಲ್ಲಿ ಸೊಂಡಿಲಿನಲ್ಲಿ ಪವಿತ್ರ ಕಳಸ ಹಿಡಿದಿರುವ ಎರಡು ಆನೆಗಳಿವೆ. ಪೀಠದ ಮಧ್ಯಭಾಗದಲ್ಲಿ ಗಂಡಭೇರುಂಡದ ಲತಾಕೋಷ್ಟಕವಿದೆ. ಶಿಲ್ಪವು ಸುಮಾರು 10ನೇ ಶತಮಾನದ ಶಿಲ್ಪಶೈಲಿಯಲ್ಲಿದ್ದು, ಗೋವಾ ಕದಂಬರ ಶಿಲ್ಪಶೈಲಿಗೆ ಉತ್ತಮ ಉದಾಹರಣೆಯಾಗಿದೆ ಎಂದು ವರದಿ ನೀಡಿದ್ದಾರೆ.

ಮೂರ್ತಿಯ ಚಾರಿತ್ರಿಕ ಮಹತ್ವ

ಗೋವಾದಲ್ಲಿರುವ ದೇವರ ಕಾಡುಗಳು ಹಾಗೂ ಕೆಲವು ದೇವಾಲಯಗಳ ಹೊರ ಆವರಣದಲ್ಲಿ ಕೆಲವು ಗಜಲಕ್ಷ್ಮೀ ಶಿಲ್ಪ ಫಲಕಗಳಿವೆ. ಅದರಲ್ಲಿ ಬಹುತೇಕ ಶಿಲ್ಪಗಳಲ್ಲಿ ಗಜಲಕ್ಷ್ಮೀ ಶಿಲ್ಪದಲ್ಲಿ ಯುದ್ಧದ ಚಿತ್ರಣಗಳೂ ಇದ್ದು, ದೇವಿಯನ್ನು ಬುಡಕಟ್ಟು ಶೈಲಿಯಲ್ಲಿ ಕೆತ್ತಲಾಗಿದೆ. ಹೀಗಾಗಿ ಅವು ದೇಸೀ ಶೈಲಿಯ ಗಜಲಕ್ಷ್ಮೀ ಶಿಲ್ಪಗಳು. ಪ್ರಸ್ತುತ ಲಕ್ಷ್ಮೀ ಶಿಲ್ಪವು ಮಾರ್ಗ ಸಂಪ್ರದಾಯಕ್ಕೆ ಸೇರಿದ ಶಿಲ್ಪವಾಗಿದೆ. ಗಂಡಭೇರುಂಡದ ಕೆತ್ತನೆಯೂ ಇರುವುದರಿಂದ ಇದು ಗೋವಾದ ವೈಷ್ಣವ ಸಂಪ್ರದಾಯಕ್ಕೆ ಸೇರಿದ ಶಿಲ್ಪವೆಂದು ಖಚಿತಪಡಿಸಬಹುದು. ಗಂಡಭೇರುಂಡ ಶಿಲ್ಪವು ಕದಂಬ, ವಿಜಯನಗರ, ಮೈಸೂರು ಒಡೆಯರ್​ ಹಾಗೂ ಪ್ರಸ್ತುತ ಕರ್ನಾಟಕ ಸರ್ಕಾರದ ರಾಜ ಲಾಂಛನವೂ ಆಗಿದೆ ಎಂದು ಆದಿಮ ಕಲಾ ಟ್ರಸ್ಟ್​ (ರಿ.) ಉಡುಪಿಯ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net