

ಶಿವಮೊಗ್ಗ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿವೆ. ಪ್ರತಿಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳನ್ನು ನೀಡಿಲ್ಲ. ಇದೀಗ ಐದು ಗ್ಯಾರಂಟಿಗಳು ಯಶಸ್ವಿ ಆಗಿರುವ ಕಾರಣಕ್ಕೆ ಅವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ಬರುವಂತಾಗಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಲಾಗಿದೆ. 1.18 ಕೋಟಿ ಮಹಿಳೆಯರಿಗೆ ತಿಂಗಳಿಗೆ ತಲಾ 2,000 ನೀಡುತ್ತಿರುವುದು ಸತ್ಯವಲ್ಲವೇ ?, ಇದುವರೆಗೆ ಯಾವುದೇ ಜಾತಿ ಧರ್ಮ ಭಾಷೆ ಬೇಧವಿಲ್ಲದೇ 130 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿರುವುದು ಸುಳ್ಳಾಗುವುದೇ ?, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ 1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 170 ರೂ. ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಮಾಸಿಕ 4ರಿಂದ 5 ಸಾವಿರ ರೂ. ಸೇರುತ್ತಿದ್ದು, ವರ್ಷಕ್ಕೆ 48ರಿಂದ 50 ಸಾವಿರ ರೂ. ಸಿಗಲಿದೆ. ಇದು ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು, ಬಡವರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಈ ಯೋಜನೆಗಳು ಹೆಚ್ಚಿಸುತ್ತವೆ ಎಂದು ಹೇಳಿದರು.