

ಉಡುಪಿ: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4,22,689 ರೂ.ಮೌಲ್ಯದ ವಿವಿಧ ಕಂಪೆನಿಯ 27 ಮೊಬೈಲ್ಗಳನ್ನು ಪತ್ತೆಹಚ್ಚಿದ ಪೊಲೀಸರು ವಾರಸುದಾರರಿಗೆ ಬುಧವಾರ ಹಸ್ತಾಂತರಿಸಿದರು.
ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಮಾತನಾಡಿ, ನಗರ ಠಾಣೆಯಲ್ಲಿ ಕೆಎಸ್ಪಿ ಆ್ಯಪ್ ಮೂಲಕ ಮೊಬೈಲ್ ಕಳವಾದ ದೂರುಗಳು ಸ್ವೀಕರಿಸಲಾಗಿದ್ದು, ಅನಂತರ ಆ ಮೊಬೈಲ್ಗಳನ್ನು ಸಿಎಸ್ಆರ್ ಪೋರ್ಟಲ್ ಆಪ್ಲಿಕೇಶನ್ ಅಡಿಯನ್ನು ಬ್ಲಾಕ್ ಮಾಡಲಾಗಿದೆ. ಕಳೆದ 3 ತಿಂಗಳಲ್ಲಿ 32 ಮೊಬೈಲ್ಗಳನ್ನು ಪತ್ತೆಹಚ್ಚಿ ಸುಮಾರು 5 ಮೊಬೈಲ್ಗಳನ್ನು ಈಗಾಗಲೇ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.
ನಗರ ಠಾಣೆಯ ನಿರೀಕ್ಷಕ ಮಂಜುನಾಥ ವಿ.ಬಡಿಗೇರ್ ಹಾಗೂ ಪೊಲೀಸ್ ಉಪನಿರೀಕ್ಷಕರಾದ ಪುನೀತ್ ಕುಮಾರ್ ಬಿಈ, ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಉಪಸ್ಥಿತರಿದ್ದರು.