ಹಾವು, ನಾಯಿ ಕಡಿತಕ್ಕೆ ಔಷಧ ಕಾಯ್ದಿರಿಸಿ

health dept meeting
ಡಿಸಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಡಿಸಿ ಗುರುದತ್ತ ಹೆಗಡೆ ನಡೆಸಿದರು. ಎನ್.ಹೇಮಂತ್, ಡಾ. ಕೆ.ಎಸ್.ನಟರಾಜ್, ಡಾ. ನಾಗರಾಜ್ ನಾಯ್ಕ, ಡಾ. ಗುಡದಪ್ಪ ಕಸುಬಿ ಇದ್ದರು.
Published on

ಶಿವಮೊಗ್ಗ: ಹಾವು ಮತ್ತು ನಾಯಿ ಕಡಿತಕ್ಕೊಳಗಾದ ವ್ಯಕ್ತಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸಾವು ಸಂಭವಿಸಬಹುದು. ಹಾಗಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಅಗತ್ಯವಿರುವ ಔಷಧಗಳನ್ನು ಸರ್ಕಾರದ ನಿಯಮಾನುಸಾರ ದಾಸ್ತಾನು ಇಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶಿಕಾರಿಪುರ ತಾಲೂಕಿನಲ್ಲಿ ಅತಿಹೆಚ್ಚು ಹಾವು ಕಡಿತ ಮತ್ತು ಸಾವಿನ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಿ ಸಕಾಲಿಕವಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಹಂತದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು ಕೇವಲ ಗರ್ಭಿಣಿ, ಬಾಣಂತಿಯರ ಬಗ್ಗೆ ಗಮನಹಿಸದೆ ಗ್ರಾಮೀಣ ಜನರ ಆರೋಗ್ಯ ಮತ್ತು ಅವಘಡಗಳಾದಾಗ ಅಗತ್ಯ ಚಿಕಿತ್ಸೆ ಕೊಡಿಸಬೇಕು. ಹಾವು ಮತ್ತು ನಾಯಿ ಕಡಿತದ ಸಂದರ್ಭ ಜನರಲ್ಲಿ ಆತ್ಮಸ್ಥೈರ್ಯ ತುಂಬಿ ವಿಳಂಬವಾಗದಂತೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಲು ಶ್ರಮಿಸಬೇಕು. ಗ್ರಾಮೀಣ ಜನರು ಕೂಡ ಆರೋಗ್ಯ ಸಂಬಂಧಿಸಿದ ತಮ್ಮ ತಕ್ಷಣದ ಅಗತ್ಯಗಳಿಗೆ ಆಶಾ ಕಾರ್ಯಕರ್ತರ ಸಲಹೆ-ಸಹಕಾರ ಪಡೆಯಬೇಕು ಎಂದು ತಿಳಿಸಿದರು. ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಎಲ್ಲ ವೈದ್ಯರೂ ಹಾವು ಮತ್ತು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲ ವೈದ್ಯರಿಗೆ ಸೂಕ್ತ ತರಬೇತಿ ನೀಡಬೇಕು. ಹಾವಿನಿಂದ ಕಡಿತಕ್ಕೆ ಒಳಗಾದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದಾಗ ವಿಳಂಬ ಮಾಡದಂತೆ ಹಾಗೂ ವೈದ್ಯರು ನಿರ್ಲಕ್ಷ್ಯ ತೋರದಂತೆ ಚಿಕಿತ್ಸೆ ನೀಡಬೇಕು. ತಾಲೂಕು ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಸದಾ ಅಗತ್ಯ ಔಷಧ ದಾಸ್ತಾನು ಇಟ್ಟುಕೊಳ್ಳಬೇಕು. ಈ ಸಂಬಂಧ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಹಾವು ಕಡಿತರದಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಪರಿಹಾರ ಧನ ದೊರೆಯುವಂತಿದ್ದಲ್ಲಿ ಅಗತ್ಯ ಸಲಹೆ ನೀಡುವಂತೆಯೂ ವೈದ್ಯರಿಗೆ ಸೂಚಿಸಿದರು. ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಡಿಎಸ್‌ಒ ಡಾ. ನಾಗರಾಜ್ ನಾಯ್ಕ, ಡಾ. ಗುಡದಪ್ಪ ಕಸುಬಿ ಎಲ್ಲ ತಾಲೂಕುಗಳ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

ಶಿಕಾರಿಪುರ ತಾಲೂಕು ಮುಡುಬಸಿದ್ದಾಪುರದ 55 ವರ್ಷದ ಲೋಲಾಕ್ಷಮ್ಮ ಅವರು ಹಾವು ಕಡಿತಕ್ಕೆ ಒಳಗಾದ ಸಂದರ್ಭ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಶಿಫಾರಸು ಮಾಡದೆ ನಾಟಿ ಔಷಧ ನೀಡಿ ಆಕೆಯ ಸಾವಿಗೆ ಕಾರಣರಾದ ಕಣ್ಣೂರಿನ ನಾಟಿ ವೈದ್ಯ ವಾಸಪ್ಪ ಅವರ ಮೇಲೆ ಮೊಕದ್ದಮೆ ದಾಖಲಿಸುವಂತೆ ಡಿಎಚ್‌ಒಗೆ ಸೂಚಿಸಲಾಗಿದೆ. - ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net