

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಈ ಬಾರಿಯ ದಸರಾ ಜಂಬೂಸವಾರಿ ಮಹೋತ್ಸವದಲ್ಲಿ ಜಿಲ್ಲೆಯಿಂದ ವಿಶೇಷ ಸ್ತಬ್ಧಚಿತ್ರದ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದ್ದು, ಕಲಾವಿದನ ಕೈಚಳಕದಲ್ಲಿ ಗಂಗರಸರ ಇತಿಹಾಸ ಮರುಸೃಷ್ಟಿ ಅಂತಿಮ ರೂಪ ಪಡೆಯುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿಶೇಷ ಎನಿಸುವಂತಹ ಸ್ತಬ್ಧಚಿತ್ರ ಪ್ರದರ್ಶನಕ್ಕೆ ದಸರಾ ಉತ್ಸವ ಸಮಿತಿ ಅವಕಾಶ ಕಲ್ಪಿಸಿದೆ. ಗ್ರಾಮಾಂತರ ಜಿಲ್ಲೆಯಿಂದ ಗಂಗರ ರಾಜಧಾನಿಯಾಗಿದ್ದ ‘ಮಣ್ಣೆ’ (ಮಾನ್ಯಪುರ) ಆಯ್ಕೆಯಾಗಿದೆ.
ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿಯಲ್ಲಿನ ಮಣ್ಣೆ ಗ್ರಾಮ ಈ ಹಿಂದೆ ಗಂಗರ ರಾಜಧಾನಿಯಾಗಿತ್ತು. ಇಲ್ಲಿನ ಕಪಿಲೇಶ್ವರ ದೇಗುಲ, ಸೂರ್ಯ ದೇಗುಲ, ಕಲಾಕೃತಿಗಳು, ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿದ್ದು, ಗಂಗರಸರ ಕಾಲದ ಇತಿಹಾಸವನ್ನು ಸಾರಿ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಗಂಗರ ಇತಿಹಾಸ ಮರುಸೃಷ್ಟಿ ಮಾಡಿ ದಸರಾ ಉತ್ಸವದಲ್ಲಿ ಪ್ರದರ್ಶಿಸಲು ಗ್ರಾಮಾಂತರ ಜಿಪಂ ಸಿದ್ಧತೆ ನಡೆಸಿದೆ.
ಮೂರರಲ್ಲಿ ಮಣ್ಣೆ ಆಯ್ಕೆ: ದಸರಾ ಉತ್ಸವ ಸಮಿತಿ ನಿಯಮಗಳಂತೆ ಜಿಪಂ ಜಿಲ್ಲೆಯ ಇತಿಹಾಸ ತಜ್ಞರು, ಕಲಾವಿದರು, ಸಾಹಿತಿಗಳಿಂದ ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಸಲಹೆ ಸೂಚನೆ ಆಹ್ವಾನಿಸಲಾಗಿತ್ತು. ಅದರಂತೆ 15 ಕ್ಕೂ ಹೆಚ್ಚು ಸ್ಥಳಗಳ ಬಗ್ಗೆ ಸಲಹೆಗಳು ಬಂದಿದ್ದವು. ಇದರಲ್ಲಿ ಪ್ರಮುಖವಾಗಿ ಕೆಐಎಡಿಬಿಯ ಏರೋಸ್ಪೇಸ್, ಬಿಂದಾಜಿಪುರದ ವೀಣೆ ತಯಾರಿಕೆ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮವನ್ನು ಆಯ್ಕೆ ಮಾಡಿ ಕಳುಹಿಸಿಕೊಡಲಾಗಿತ್ತು. ಇವುಗಳನ್ನು ಪರಿಶೀಲನೆ ನಡೆಸಿದ ಸಮಿತಿ ಅಂತಿಮವಾಗಿ ಮಣ್ಣೆ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಮೈಸೂರಿನ ಎಪಿಎಂಸಿಯಲ್ಲಿ ಜಾಗ: ನೆಲಮಂಗಲದಲ್ಲಿ ಕಲಾವಿದರ ತಂಡವೊಂದು ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಅಂತಿಮ ಸ್ಪರ್ಶಕ್ಕೆ ಮೈಸೂರಿನ ಎಪಿಎಂಸಿ ಮೈದಾನದಲ್ಲಿ ದಸರಾ ಉತ್ಸವ ಸಮಿತಿ ಜಾಗ ಗುರುತಿಸಿಕೊಟ್ಟಿದೆ. ಅಲ್ಲಿ ಸ್ತಬ್ಧಚಿತ್ರ ಸಂಪೂರ್ಣವಾಗಿ ತಯಾರಾಗಲಿದ್ದು, ಅ.5ರಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಮಣ್ಣೆ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ.
ಇತಿಹಾಸ ಅಧ್ಯಯನ: ಮಣ್ಣೆ ಕುರಿತಂತೆ ಸ್ಥಳೀಯ ಸಾಹಿತಿ ಗೋಪಾಲ್‌ರಾವ್ ಎಂಬುವರು ಬರೆದ ಪುಸ್ತಕವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಾಗಿದೆ. ಈ ಪುಸ್ತಕ ಗಂಗರಸರ ಕಾಲದ ಸಂಪೂರ್ಣ ಪರಿಚಯ ಮಾಡಿಕೊಡುತ್ತದೆ. ಇದರ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಗಂಗರಸರ ಕಾಲದ ದೇಗುಲ, ಶಿಲ್ಪಕಲೆ ಮತ್ತಿತರ ವಿಷಯಗಳನ್ನು ಅಧ್ಯಯನ ಮಾಡಲಾಗಿದೆ.
ವೀಣೆಗೂ ಸ್ಥಾನಮಾನ: ಜಿಲ್ಲೆಯ ಬಿಂದಾಜಿಪುರ, ವೀಣೆ ತಯಾರಿಕೆಗೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು, ನಾಡಿನ ಸಂಗೀತ ಪರಂಪರೆ ಪರಿಚಯಿಸುವ ದೃಷ್ಟಿಯಿಂದ ದಸರಾ ಉತ್ಸವ ಸಮಿತಿ ಸಲಹೆಯಂತೆ ಇದರಲ್ಲಿ ವೀಣೆಗೂ ವಿಶೇಷ ಸ್ಥಾನ ನೀಡಲಾಗಿದೆ. ಅದರಂತೆ ಕಪಿಲೇಶ್ವರ ದೇಗುಲ, ಅಕ್ಕ-ತಂಗಿಯರ ದೇಗುಲ ಜೈನಬಸದಿಯೊಂದಿಗೆ ಮುಂಭಾಗದಲ್ಲಿ ವೀಣೆ ಪ್ರದರ್ಶನ ಗಮನ ಸೆಳೆಯಲಿದೆ.
ಗಂಗರಸರ ಕಾಲದ ಇತಿಹಾಸವನ್ನು ಮರುಸೃಷ್ಟಿಸುವ ಪ್ರಯತ್ನ ಇದಾಗಿದೆ. ಗಂಗರಸರ ಕಾಲದ ಇತಿಹಾಸ ಅಧ್ಯಯನ ಮಾಡಿ ಖುದ್ದು ಮಣ್ಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಸರಾ ಉತ್ಸವ ಸಮಿತಿ ನಿಯಮಗಳಂತೆ ಸ್ತಬ್ಧಚಿತ್ರ ನಿರ್ಮಾಣಕ್ಕೆ ಶ್ರಮಿಸಲಾಗಿದೆ. ಗಂಗರ ಕಾಲದ ವೈಭವ, ಜನಜೀವನ ಮತ್ತಿತರ ವಿಷಯಗಳ ಕುರಿತು ಸ್ತಬ್ಧಚಿತ್ರದ ಮೂಲಕ ಜನರಿಗೆ ಪರಿಚಯ ಮಾಡಿಸುವ ಪ್ರಯತ್ನ ಇದಾಗಿದೆ.
ದಸರಾ ಉತ್ಸವದಲ್ಲಿ ಜಿಲ್ಲೆಯಿಂದ ವಿಶೇಷ ಎನಿಸುವಂತಹ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಮಣ್ಣೆಯನ್ನು ಆಯ್ಕೆ ಮಾಡಿ ಇದರ ಕುರಿತು ತಯಾರಿ ಆರಂಭವಾಗಿದೆ. ಸಿಇಒ ಅಧ್ಯಕ್ಷತೆಯಲ್ಲಿ ಅವರ ಸಲಹೆ ಮಾರ್ಗಸೂಚನೆಯಂತೆ ಎಲ್ಲ ತಯಾರಿ ನಡೆಯುತ್ತಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿದ್ದು, ಇದರಲ್ಲಿ ಗಂಗರಸರ ಕಾಲದ ಇತಿಹಾಸ ಪರಿಚಯ ಮಾಡುವ ಪ್ರಯತ್ನ ಇದಾಗಿದೆ.