

ವಿಜಯಪುರ: ಯತ್ನಾಳ ಯಾವಾಗಲೂ ಹಿಟ್ ಆಂಡ್ ರನ್ ಮಾಡುತ್ತಾರೆ. ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕೊಡುತ್ತೇನೆ. ಸವಾಲು ಹಾಕಿರುವ ಯತ್ನಾಳ ತಾವೂ ರಾಜೀನಾಮೆ ನೀಡುತ್ತಾರಾ? ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದ್ದಾರೆ.
ಲೆಟರ್ ಹೆಡ್‌ನಲ್ಲಿ ನಾನು ಕೇವಲ ಸಹಿ ಮಾಡಿ ಕೊಡುತ್ತೇನೆ, ನೀವೇ ರಾಜೀನಾಮೆ ವಿಷಯ ಬರೆದು ಸಭಾಧ್ಯಕ್ಷರಿಗೆ ಕೊಡಿ. ಅದೇ ರೀತಿ ಸವಾಲು ಹಾಕಿರುವ ಯತ್ನಾಳ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಬ್ಬರ ರಾಜೀನಾಮೆ ಪತ್ರವನ್ನು ಅವರೇ ಸಭಾಧ್ಯಕ್ಷರಿಗೆ ನೀಡಲಿ. ಸಭಾಪತಿಗಳು ಬೇಕಾದರೆ ಮೊದಲು ನನ್ನ ರಾಜೀನಾಮೆ ಅಂಗೀಕರಿಸಿ, ನಂತರ ಯತ್ನಾಳ ರಾಜೀನಾಮೆ ಅಂಗೀಕರಿಸಲಿ ಎಂದು ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಸಾರ್ವಜನಿಕವಾಗಿ ಬಳಸಲು ಸಾಧ್ಯವಿಲ್ಲದ ಪದ ಬಳಸಿ ಸವಾಲು ಹಾಕಿದ್ದು ಯತ್ನಾಳ ಅವರೇ ಹೊರತು ನಾನಲ್ಲ. ರಾಜೀನಾಮೆ ನೀಡುವ ಮೂಲಕ ನಾನು ನನ್ನ ಇಂಟೆನ್ಶನ್ ಎಕ್ಸ್‌ಪ್ರೆಸ್ ಮಾಡಿದ್ದೇನೆ. ಯತ್ನಾಳ ಹಾಕಿದ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ, ಈಗಲೂ ನಾನು ರಾಜೀನಾಮೆಗೆ ಬದ್ಧ, ಹಾಗೆಯೇ ಯತ್ನಾಳ ಸಹ ರಾಜೀನಾಮೆ ನೀಡಬೇಕು. ನಾನು ಷರತ್ತು ಹಾಕಿ ರಾಜೀನಾಮೆ ನೀಡಿರುವುದೇ ಇದೇ ಕಾರಣಕ್ಕೆ ಎಂದ ಸಚಿವರು, ಹಾಗೊಂದು ವೇಳೆ ನನ್ನ ರಾಜೀನಾಮೆ ಅಂಗೀಕಾರವಾದ ಬಳಿಕ ಯತ್ನಾಳ ರಾಜೀನಾಮೆ ಸಲ್ಲಿಸಿದೆ ಹೋದರೆ? ಎಂದು ಪ್ರಶ್ನಿದರು.
ಬಸವನಬಾಗೇವಾಡಿ, ವಿಜಯಪುರ, ಇಂಡಿ ಇವು ಯಾವೂ ಪಾಕಿಸ್ತಾನ ಅಲ್ಲ. ಹತಾಶರಾಗಿರುವ ಯತ್ನಾಳ ತಾಳ್ಮೆ ಕಳೆದುಕೊಂಡು ಮಾತನಾಡುವ ಓಘದಲ್ಲಿ ಪದೇ ಪದೇ ಇಂಥ ಮಾತನಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇಂಥ ಸವಾಲು ಹಾಕಿದ ಮೇಲೆ ಹಾಕಿದವರು ಸ್ವೀಕರಿಸಿ ಮುನ್ನಡೆಯಬೇಕು. ಇಲ್ಲವೇ ಸುಮ್ಮನೇ ಇರಬೇಕು ಎಂದರು.
ಮಹ್ಮದ್ ಪೈಗಂಬರ್ ಬಗ್ಗೆ ಯತ್ನಾಳ ಅವಹೇಳನಾಕಾರಿ ಮಾತನಾಡಿದ್ದನ್ನು ಖಂಡಿಸಿ ಕಳೆದ ಏಪ್ರಿಲ್ 28 ರಂದು ಯತ್ನಾಳ ವಿರುದ್ದ ಮುಸ್ಲಿಂ ಸಂಘಟನೆಗಳು ಪ್ರತಿಭಟನಾ ಸಮಾವೇಶ ಮಾಡಿದ್ದರು. ಸಮಾವೇಶದಲ್ಲಿ ನಾನೂ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದೆವು. ಇದಾದ ಬಳಿಕ ನನ್ನನ್ನು ಸಂದರ್ಶನ ಮಾಡಿದ ಖಾಸಗಿ ಸುದ್ದಿ ವಾಹಿನಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ .ಬಿ. ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸದ ಕುರಿತು ಪ್ರಶ್ನೆ ಕೇಳಿದ್ದರು. ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಪಾಲ್ಗೊಳ್ಳುವ ಕುರಿತು ಕಾರ್ಯಕ್ರಮದ ಸಂಘಟಿಸಿದ್ದ ಮುಸ್ಲಿಂ ಮುಖಂಡರು ಹೇಳಿದ್ದರು ಇದನ್ನೇ ನಾನು ಅಲ್ಲಿ ಹೇಳಿದ್ದೆ ಎಂದರು.
ಬೆಳಗಾವಿ ಸಮಾವೇಶಕ್ಕೆ ನಮಗೂ, ಜಿಲ್ಲೆಯ ಕಾಂಗ್ರೆಸ್ ಎಲ್ಲ ಶಾಸಕರಿಗೂ ಆಹ್ವಾನವಿತ್ತು. ನನ್ನ ಕ್ಷೇತ್ರದ ಜನರೂ ಬೆಳಗಾವಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಖಾಸಗಿ ವಾಹಿನಿ ಪತ್ರಕರ್ತರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನನ್ನ ಈ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ ದೊಡ್ಡದು ಮಾಡಬೇಕಿರಲಿಲ್ಲ ಎಂದರು.
ಸಚಿವ ಎಂ.ಬಿ.ಪಾಟೀಲ ಅವರು ನಾನು ಏಪ್ರೀಲ್ 28 ರಂದು ಬೆಳಗಾವಿಯಲ್ಲಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ಪಾಲ್ಗೊಂಡಿದ್ದ ಬೆಳಗಾವಿಗೆ ಹೋಗಿದ್ದಾಗಿ, ಈ ವಿಷಯ ಗೊತ್ತಿದ್ದೂ ಸಚಿವ ಶಿವಾನಂದ ಪಾಟೀಲ ನನ್ನನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ ಎಂದು ಆಕ್ಷೇಪಿಸಿ ದೊಡ್ಡದು ಮಾಡಿ ಪ್ರತಿಕ್ರಿಯಿಸಿದ್ದಾರೆ. ಇಷ್ಟಕ್ಕೂ ಈ ವಿಷಯವನ್ನು ನಾನು ಎಳೆದು ತಂದಿಲ್ಲ. ನಾನು ಮುಸ್ಲಿಂರನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ವಿಜಯಪುರ ಪ್ರತಿಭಟನಾ ಸಮಾವೇಶದಲ್ಲಿ ನಾನು ಸಚಿವ ಎಂ.ಬಿ. ಪಾಟೀಲ ಅವರ ಕುರಿತು ಮಾತನಾಡಿಲ್ಲ. ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಎಂ.ಬಿ. ಪಾಟೀಲ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು ಎಂದು ಹೇಳಿದ್ದೆ. ಸುದ್ದಿ ವಾಹಿನಿಯವರ ಪ್ರಶ್ನೆಗೆ ಸಹಜವಾಗಿ ಉತ್ತರ ನೀಡಿದ್ದೇನೆ. ಉದ್ದೇಶಪೂರ್ವಕ ನೀಡಿದ ಹೇಳಿಕೆಯಲ್ಲ. ಇದನ್ನೇ ಅವರು ದೊಡ್ಡದು ಮಾಡುವುದು ಅಲ್ಲ. ಪ್ರತಿಭಟನೆಗೆ ಸಚಿವ ಎಂ.ಬಿ. ಪಾಟೀಲರು ಆಗಮಿಸುತ್ತಾರೆ ನೀವು ಆಗಮಿಸಿ ಎಂದು ಮುಸ್ಲಿಂ ಮುಖಂಡರು ಹೇಳಿದ್ದರು. ಹಾಗಾಗಿ ನಾನು ಪ್ರತಿಭಟನಾ ಸಮಾವೇಶಕ್ಕೆ ಎಂ.ಬಿ. ಪಾಟೀಲರು ಆಗಮಿಸಬೇಕಿತ್ತು ಎಂದು ಮಾಧ್ಯಮದವರು ಕೇಳಿದ್ದಕ್ಕೆ ಹೇಳಿದ್ದೇನೆ ಎಂದಿದ್ದಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಕುರಿತು ಎಂಬಿ ಪಾಟೀಲ ಅವರು ಹೈಕಮಾಂಡ್‌ಗೆ ದೂರು ಕೊಡುವುದಾರೆ ಅವರ ವಿವೇಚನೆಗೆ ಬಿಟ್ಟದ್ದು ಎಂದರು.