ಪಡಿತರ ಕನ್ನಕ್ಕೆ ಇನ್ನೂ ಬೀಳುತ್ತಿಲ್ಲ ಬ್ರೇಕ್: 6 ತಿಂಗಳಲ್ಲಿ 16 ಸಾವಿರ ಕ್ವಿಂಟಾಲ್ ಜಫ್ತಿ

141 quintals of ration millet seized Mandya
Published on

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾವಿರಾರು ಕೋಟಿ ಹಣ ಭರಿಸಿ ಉಚಿತವಾಗಿ ಕಾರ್ಡ್‌ದಾರರಿಗೆ ಪಡಿತರ ವಿತರಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಡಿತರ ದುರ್ಬಳಕೆ ಮೀತಿ ಮೀರಿದೆ.

ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಹಾಗೂ ರಾಜ್ಯದ ‘ಅನ್ನಭಾಗ್ಯ’ಯೋಜನೆಯ ಪಡಿತರ ಕನ್ನಕ್ಕೆ ವಿವಿಧ ಮಾರ್ಗಗಳಲ್ಲಿ ಕನ್ನ ಹಾಕುತ್ತಿದ್ದು, ಇನ್ನೂ ಕಡಿವಾಣವೇ ಬೀಳುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಪಡಿತರ ದುರ್ಬಳಕೆ ಕೇಸ್‌ಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿವೆ. 6 ತಿಂಗಳಲ್ಲಿ ರಾಜ್ಯಾದ್ಯಂತ ಬರೋಬ್ಬರಿ 16 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ, ರಾಗಿ ಸೇರಿ ಇತರ ಧಾನ್ಯ ಜಫ್ತಿ ಮಾಡಲಾಗಿದೆ. ಸಾಕಷ್ಟು ಸಂದರ್ಭದಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಸಗಟು ಮಳಿಗೆಗಳ ಮ್ಯಾನೇಜರ್ ಸೇರಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳೇ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ಇದರಿಂದ ಕಠಿಣ ಕ್ರಮಕೈಗೊಳ್ಳಲು ಈವರೆಗೆ ಇಲಾಖೆಗೆ ಸಾಧ್ಯವಾಗಿಲ್ಲ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಕಾರ್ಡ್‌ದಾರರಿಗೆ ವಿತರಿಸಬೇಕಿದ್ದ 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ವಾರದಲ್ಲೇ 2 ಕೇಸ್‌ಗಳು ದಾಖಲಾಗಿವೆ. ತಾಲೂಕಿನ ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 262 ಕ್ವಿಂಟಾಲ್ ಅಕ್ಕಿ ಜಫ್ತಿ ಪ್ರಕರಣ ಸಂಬಂಧ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ತಪಾಸಣೆ ನಡೆಸುವಂತೆ ಇಲಾಖೆ ಆದೇಶಿಸಿದೆ. ಇದು ಮೇಲ್ನೋಟಕ್ಕೆ ಪಡಿತ ಅಕ್ಕಿ ಎಂಬುದು ಸಾಬೀತಾಗಿದೆ. ಈ ಅಕ್ಕಿ ಎಲ್ಲಿಂದ ಸಂಗ್ರಹಣೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸುವ ಸಲುವಾಗಿ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ತಪಾಸಣೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಇಲಾಖೆಯ ಜಂಟಿ ನಿರ್ದೇಶಕರು, ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಅದೇ ತಾಲೂಕಿನಲ್ಲಿ 300-400 ಅಕ್ಕಿ ಚೀಲವನ್ನು ಜಫ್ತಿ ಮಾಡಲಾಗಿದೆ. ಆದರೆ, ಪೊಲೀಸರು ನೋಟಿಸ್ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಜಿಲ್ಲೆಯ ಇಲಾಖೆ ಕೆಲ ಅಧಿಕಾರಿಗಳು ಸಗಟು ಮಳಿಗೆ ಮ್ಯಾನೇಜರ್‌ಗಳ ಜೊತೆ ಶಾಮೀಲಾಗಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ, ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ತನಿಖೆ ನಡೆಸಿದರೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂಬ ಒತ್ತಾಯ ಕೇಳಿಬಂದಿದೆ.

ಹಲವು ಮಾರ್ಗದಲ್ಲಿ ಕನ್ನ:

ಇಲಾಖೆ ವತಿಯಿಂದ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ 1.17 ಕೋಟಿ ಬಿಪಿಎಲ್, 10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ಈ ವೇಳೆ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ರೇಷನ್ ವಿತರಣೆ ತೂಕದಲ್ಲಿ ಮೋಸ ಮಾಡಿದರೆ, ಅಕ್ಕಿ ಗಿರಣಿ ಮಾಲೀಕರು ಕಾಳಸಂತೆಯಲ್ಲಿ ಅಕ್ರಮವಾಗಿ ಅಕ್ಕಿ ಖರೀದಿಸಿ ಪಾಲಿಶ್, ಸಾರ್ಟೆಕ್ಸ್ ಮಾಡಿ ಬೇರೆ ಬೇರೆ ಬ್ರಾಂಡ್‌ನ ಹೆಸರಿನಲ್ಲಿ ಪ್ಯಾಕಿಂಗ್ ಮಾಡಿ ವಿದೇಶಗಳಿಗೆ, ರಾಜ್ಯದ ಮಾರುಕಟ್ಟೆಯಲ್ಲಿ ಹೆಚ್ಚಿನೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿಯನ್ನು ದಾಸ್ತಾನು ಮಾಡುವ ಸಗಟು ಮಳಿಗೆಗಳಲ್ಲಿ ಇಲಾಖೆಯ ಕೆಲ ಅಧಿಕಾರಿಗಳೇ ಕನ್ನ ಹಾಕುತ್ತಿದ್ದಾರೆ.ಭಾರತ ಆಹಾರ ನಿಗಮದ(ಎಫ್​ಸಿಐ) ಗೋದಾಮಿನಿಂದ ಸಗಟು ಮಳಿಗೆಗಳಿಗೆ ಲಾರಿಗಳಲ್ಲಿ ಪಡಿತರ ಸಾಗಿಸುವ ವೇಳೆ ಲಾರಿ ಮಾಲೀಕರು, ಚಾಲಕರು, ಹಮಾಲಿಗಳು ಪ್ರತಿ ಚೀಲದಲ್ಲಿ 3-4 ಕೆಜಿ ಅಕ್ಕಿ ಕದ್ದು ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಕೆಲ ಕಾರ್ಡ್‌ದಾರರು ಸತ್ತಿರುವ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ಕಿ ಪಡೆದರೆ, ಕೆಲವರು ಪ್ರತಿ ತಿಂಗಳು ಪಡೆಯುವ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net