

ಕುಶಾಲನಗರ:
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ವ್ಯಕ್ತಿಗಳಿಗೆ ಐದು ಸಾವಿರದವರೆಗೆ ದಂಡ ಹಾಕಲಾಗುತ್ತದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕಸದ ಗಾಡಿ ದಿನನಿತ್ಯ ಪುರಸಭೆ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದ್ದರೂ ಕೆಲವು ವ್ಯಕ್ತಿಗಳು ನಗರದ ವಿವಿಧ ಭಾಗಗಳಲ್ಲಿ ಕಸ ಎಸೆಯುವುದು ಕಂಡು ಬರುತ್ತದೆ.
ಇಂಥವರನ್ನು ಕಂಡು ಹಿಡಿದು ದಂಡ ವಸೂಲಿ ಹಾಗೂ ಕಾನೂನು ರೀತಿಯಲ್ಲಿ ಮೊಕದ್ದಮೆ ಹೂಡಲಾಗುತ್ತದೆ. ಅದೇ ರೀತಿಯಲ್ಲಿ ಇಂತಹ ಸ್ಥಳಗಳಲ್ಲಿ ಸಿ.ಸಿ.ಟಿವಿಯನ್ನು ಅಳವಡಿಸುವ ಬಗ್ಗೆ ಮತ್ತು ಪುರಸಭಾ ವ್ಯಾಪ್ತಿಯ ಕಸವಿಲೇವಾರಿ ಮಾಡುವ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಗೋಡೆ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆಗೆ ಬಳಸುತ್ತಿರುವ ಟ್ರಾಕ್ಟರ್, ಟ್ರೈಲರ್‌ಗಳು ತುಕ್ಕು ಹಿಡಿದಿರುವುದರಿಂದ ಹೊಸ ಟ್ರೈಲರ್ ಖರೀದಿಸುವ ಬಗ್ಗೆ, ಘನತ್ಯಾಜ್ಯ ವಿಲೇವಾರಿ ಮಾಡಲು ಬಳಸುತ್ತಿರುವ ಟ್ರ‍್ಯಾಕ್ಟರ್‌ಗೆ ಹೊಸ ಟೈಯರ್ ಖರೀಸುವ ಬಗ್ಗೆ ಹಾಗೂ ಇನ್ನಿತರ ವಿಷಯದ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸ್ಥಾಯಿ ಸಮಿತಿ ಸದಸ್ಯರಾದ ಎಂ.ಕೆ. ದಿನೇಶ್, ಜಯವರ್ಧನ್, ಜಗದೀಶ್, ಸುರಯ್ಯಾಬಾನು, ಜಯಲಕ್ಷ್ಮಮ್ಮ, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.