

ರಾಮಕಿಶನ್ ಕೆ.ವಿ. ಬೆಂಗಳೂರು
ನೀವೊಮ್ಮೆ ಭಾನುವಾರ ಮುಂಜಾನೆ ಕಬ್ಬನ್ ಪಾರ್ಕ್ಗೆ ತೆರಳಿ. ವಾಕಿಂಗ್ ಮಾಡುವವರ ನಡುವೆ ವಿವಿಧ ಅನೇಕರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಕುತೂಹಲವಿದ್ದರೆ ಮಾತನಾಡಿಸಿ, ಹೊಸ ಹೊಸ ವಿಷಯಗಳು ತಿಳಿದರೂ ತಿಳಿಯಬಹುದು!
ಈ ನಡುವೆ ದೇವ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಮಾತನಾಡುವವರ ಸಂಖ್ಯೆ ಇಳಿಮುಖವಾಗುತ್ತಿವೆ ಎಂಬ ಮಾತುಗಳು ವ್ಯಕ್ತವಾಗುತ್ತಲೇ ಇವೆ. ಜತೆಗೆ ಸಂಸ್ಕೃತ ಭಾಷೆಯ ಉಳಿವಿಗೆ ವಿವಿಧ ಪ್ರಯತ್ನಗಳೂ ನಡೆಯುತ್ತಿವೆ. ವಿಶ್ವವಿದ್ಯಾಲಯಗಳಿದ್ದರೂ, ಸಂಸ್ಕೃತ ಮಾತನಾಡುವವರ ಸಂಖ್ಯೆ ಹೆಚ್ಚಾದಾಗ ಮಾತ್ರ, ಭಾಷೆ ಉಳಿಯಲು ಸಾಧ್ಯ ಎಂಬುದು ವಾಸ್ತವ.
ಸಂಸ್ಕೃತದ ಬಳಕೆಯನ್ನು ಜನಪ್ರಿಯಗೊಳಿಸುವ ಉದ್ದೇಶದೊಂದಿಗೆ ಸ್ಥಾಯಿ.ಇನ್ ಸಂಸ್ಥೆ ಕಳೆದ ಮೂರು ತಿಂಗಳಿನಿಂದ ಪ್ರತಿ ಭಾನುವಾರ ಕಬ್ಬನ್ ಪಾರ್ಕ್ನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಸಂಸ್ಕೃತ ಕಲಿಯಬೇಕೆಂಬ ಬಯಕೆ ಹೊಂದಿರುವ ಮಕ್ಕಳು, ವಯಸ್ಕರು ಸೇರಿದಂತೆ ವಿವಿಧ ವಯೋಮಾನದವರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿ ಭಾನುವಾರ ಬೆಳಗ್ಗೆ 7.30ಕ್ಕೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ 'ಸಂಸ್ಕೃತ ವಾಕ್' ಆರಂಭವಾಗುತ್ತದೆ. ತಂಡದ ಸದಸ್ಯರು ಸಂಸ್ಕೃತದಲ್ಲಿ ಮಾತನಾಡುತ್ತಾ, ಮುಂದುವರಿಯುತ್ತಾರೆ. ಈ ವೇಳೆ ಸರಳ ಪದಗಳನ್ನು ಅನುವಾದ ಮಾಡಿ ತಿಳಿಸಿಕೊಡಲಾಗುತ್ತದೆ. ಹೊಸ ಭಾಷೆ ಕಲಿಯುವ ಆಸಕ್ತಿಯಿದ್ದರೆ ಯಾರು ಬೇಕಿದ್ದರೂ ತಂಡವನ್ನು ಸೇರಿಕೊಳ್ಳಬಹುದು. ವ್ಯವಹರಿಸುತ್ತಾ, ಭಾಷೆಯ ಬಗ್ಗೆ ಜ್ಞಾನ ಹೆಚ್ಚುತ್ತದೆ. ಪ್ರತಿಬಾರಿ 20-40 ಮಂದಿ ಜೊತೆಯಾಗುತ್ತಾರೆ.
ನಡಿಗೆ ನಂತರ ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಎಣಿಸುತ್ತಾ ವ್ಯಾಯಾಮ ಆರಂಭಿಸಲಾಗುತ್ತದೆ. ಜತೆಗೆ ಧಮ್ ಶರತ್, ಅನುವಾದ ಕ್ರಮ, ವಾಕ್ಯ ರಚನೆ ಸೇರಿ ಭಾಷೆಯ ಕಲಿಕೆಗೆ ಸಹಕಾರಿಯಾಗುವ ಚಟುವಟಿಕೆ ನೀಡಲಾಗುತ್ತದೆ. 16-40 ವರ್ಷ ಆಸುಪಾಸಿನ ಜನರು ತಂಡದೊಂದಿಗೆ ಸೇರಿಕೊಂಡಿದ್ದಾರೆ. ಸಾಕಷ್ಟು ಮಂದಿ ಸಂಸ್ಕೃತದಲ್ಲಿ ವ್ಯವಹರಿಸಲು ಆರಂಭಿಸಿದ್ದಾರೆ. ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ 'ವ್ಲಾಗ್' ಆರಂಭಿಸಿದ್ದಾರೆ ಎಂದು ಸ್ಥಾಯಿ.ಇನ್ ಸಂಸ್ಥಾಪಕಿ ಸಮಷ್ಠಿ ಗುಬ್ಬಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತ ಭಾಷೆಯನ್ನು ಪಸರಿಸುವ ಉದ್ದೇಶದೊಂದಿಗೆ ಸ್ಥಾಯಿ.ಇನ್ ತಂಡ ಬೆಂಗಳೂರು ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ತಂಡ ಕಟ್ಟಿದೆ. ತಂಡದ ಸದಸ್ಯರು ಪುಣೆ, ಮುಂಬೈಗೆ ತೆರಳಿ, ಅಲ್ಲಿನ ಆಸಕ್ತರಿಗೆ ಸಂಸ್ಕೃತ ಬಗ್ಗೆ ವಿವಿಧ ಚಟುವಟಿಕೆ ನಡೆಸುತ್ತಾರೆ. ಜತೆಗೆ 'ಸಂಸ್ಕೃತ ರೈಡ್'ನ್ನೂ ಆಯೋಜಿಸಿದೆ. ಇತ್ತೀಚೆಗೆ ಸಂಸ್ಕೃತ ಮಾತನಾಡುವ ಹಳ್ಳಿ ಎಂದು ಖ್ಯಾತಿಯಾಗಿರುವ ಶಿವಮೊಗ್ಗ ಸಮೀಪದ "ಮತ್ತೂರು' ಗ್ರಾಮಕ್ಕೆ ಪ್ರವಾಸ ಕೈಗೊಂಡಿತ್ತು.
ಸಾಕಷ್ಟು ಮಂದಿ ಸಂಸ್ಕೃತ ಕಲಿತಿದ್ದರೂ, ಮುಂದೇನು ಎಂಬುದು ಗೊತ್ತಿರುವುದಿಲ್ಲ. ಹಲವರಿಗೆ ಸಂಸ್ಕೃತ ಭಾಷೆಯ ಬಗ್ಗೆ ಒಲವಿದ್ದರೂ, ಹೇಗೆ ಕಲಿಯಬೇಕು ಎಂಬುದು ತಿಳಿದಿಲ್ಲ. ಅನೇಕರು ಶಾಲೆ, ಕಾಲೇಜುಗಳಲ್ಲಿ ಸಂಸ್ಕೃತ ಕಲಿತಿದ್ದರೂ, ಮಾತನಾಡಲು ಹಿಂದೇಟು ಹಾಕುತ್ತಾರೆ. ಸಂಸ್ಕೃತ ಸಂಭಾಷಣೆ ಬಗ್ಗೆ ಪ್ರೋತ್ಸಾಹಿಸುವುದು ಹಾಗೂ ಇನ್ನಷ್ಟು ಜನರಿಗೆ ಪ್ರಾಚಿನ ಭಾಷೆಯ ಬಗ್ಗೆ ತಿಳಿಸಿಕೊಡುವುದು ನಮ್ಮ ಉದ್ದೇಶ. ಪ್ರತಿ ವಾರ ಆಸಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
-ಸಮಷ್ಠಿ ಗುಬ್ಬಿ, ಸಂಸ್ಥಾಪಕಿ, ಸ್ಥಾಯಿ.ಇನ್