ರಾಜ್ಯದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಗಳ ವಿರುದ್ಧ ಕಠಿಣ ಕ್ರಮ :ಸಚಿವ ದಿನೇಶ್ ಗುಂಡೂರಾವ್

IMG-20241216-WA0003.jpg
Published on

ಬೆಳಗಾವಿ: ರಾಜ್ಯದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಗಳ ವಿರುದ್ಧ ಕೆ. ಪಿ. ಎಂ. ಇ. ತಿದ್ದುಪಡಿ ಅಧಿನಿಯಮದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ 2017 ಸೆಕ್ಷನ್ 5 ರಂತೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿ, ನಿಯಾಮಾನುಸಾರ ಕೆ.ಪಿ.ಎಂ.ಇ ನೋಂದಣಿ ಪ್ರಮಾಣಪತ್ರವನ್ನು ಪಡೆದು, ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಪ್ರಾರಂಭಿಸಬಹುದಾಗಿರುತ್ತದೆ.

ಸದರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು, ಕೆ.ಪಿ.ಎಂ.ಇ ಅಧಿನಿಯಮ 2007, ಸೆಕ್ಷನ್ 4. ರನ್ವಯ ನೊಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರವಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಸಮಿತಿಯ ಸದಸ್ಯ ಕಾರ್ಯದರ್ಶಿಗಳು) ಹಾಗೂ ಸಮಿತಿಯ ಇತರೆ ಸದಸ್ಯರಾದ ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದಿಂದ ಓರ್ವ ಸದಸ್ಯರು ಮತ್ತು ಓರ್ವ ಮಹಿಳಾ ಪ್ರತಿನಿಧಿಯನ್ನೊಳಗೊಂಡಿರುತ್ತದೆಎಂದರು.

ಜನವರಿ 2021 ರಿಂದ ಇಲ್ಲಿಯವರೆಗೆ ಕೋಲಾರ ಜಿಲ್ಲೆಯಲ್ಲಿ 134 ನಕಲಿ ವೈದ್ಯರ ಕ್ಲಿನಿಕ್ಗಳನ್ನು ಪತ್ತೆ ಹಚ್ಚಲಾಗಿದೆ.

ಈ ಪೈಕಿ 16 ಕ್ಲಿನಿಕ್ಗಳನ್ನು ಸೀಜ್ ಮಾಡಲಾಗಿದೆ, 8 ಪಿ. ಸಿ .ಆರ್ ಪ್ರಕರಣಗಳು ದಾಖಲಾಗಿವೆ, 1 ಪ್ರಕರಣವು ಎಫ್. ಐ.ಆರ್ ಆಗಿದೆ, 7 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ 102 ಕ್ಲಿನಿಕ್ಗಳನ್ನು ಮುಚ್ಚಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net