

ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2024-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.99.8 ಫಲಿತಾಂಶ ಬಂದಿದ್ದು, ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿನ ಒಟ್ಟು 474 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 473 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಒಟ್ಟು 241 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ವಿ.ಲೇಖನಾ-587(ಶೇ.97.83), ಎಸ್.ರುತ್ವಿಕ್-587(ಶೇ.97.83), ಟಿ.ಸಿ.ಶಶಾಂಕ್-587(97.83), ಬಿ.ಆರ್.ಶೀತಲಾ-586(97.67) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪಿಸಿಎಂಬಿ ವಿಭಾಗದಿಂದ 405 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 405 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ತಂದಿದ್ದಾರೆ. ಪಿಸಿಎಂಸಿ ವಿಭಾಗದಿಂದ 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 68 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.8 ಫಲಿತಾಂಶ ಬಂದಿದೆ.
ಕನ್ನಡ ವಿಷಯದಲ್ಲಿ 14 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 32 ವಿದ್ಯಾರ್ಥಿಗಳು, ಜೀವಶಾಸ್ತ್ರ ವಿಷಯದಲ್ಲಿ 4 ವಿದ್ಯಾರ್ಥಿಗಳು, ಗಣಕಯಂತ್ರ ವಿಷಯದಲ್ಲಿ 3 ವಿದ್ಯಾರ್ಥಿಗಳು, ಭೌತಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ತಲಾ ಒಬ್ಬ ವಿದ್ಯಾರ್ಥಿ 100 ಅಂಕಗಳನ್ನು ಗಳಿಸಿದ್ದಾರೆ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಒಡೆತನದ ಎಸ್‌ಟಿಜಿ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಕಾಲೇಜಿಗೆ ಉತ್ತಮ ಫಲಿತಾಂಶದೊಂದಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಪುಟ್ಟರಾಜು ಹಾಗೂ ಆಡಳಿತಾಧಿಕಾರಿಗಳು ಅಭಿನಂದಿಸಿದ್ದಾರೆ.