

ಪಾಂಡವಪುರ: ಗ್ರಾಮೀಣ ಮಕ್ಕಳು ಅಮೆರಿಕದಲ್ಲೂ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆ ದೇಶದ ಸಾಗಿನವ್ ವ್ಯಾಲಿ ವಿಶ್ವವಿದ್ಯಾಲಯದ ಜತೆ ವಿದ್ಯಾರ್ಥಿ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಹೇಳಿದರು.
ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಒಪ್ಪಂದ ವಿನಿಮಯ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಮಕ್ಕಳಿಗೂ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗಬೇಕು. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕು ಎಂಬ ಆಶಯ ನಮ್ಮದು. ಅದಕ್ಕಾಗಿ ಸಾಗಿನವ್ ವ್ಯಾಲಿ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದ ಪ್ರಕಾರ ಇಲ್ಲಿನ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಜತೆಗೆ, ನಮ್ಮ ಸಂಸ್ಥೆಯ ಶಿಕ್ಷಕರು ಅಮೆರಿಕಕ್ಕೆ ತೆರಳಿ ಅಲ್ಲಿನ ಶಿಕ್ಷಣ ಮತ್ತು ಸಂಸ್ಕೃತಿ ಅಧ್ಯಯನ ಮಾಡಬಹುದು. ಅದೇ ರೀತಿ ಅಲ್ಲಿನ ಶಿಕ್ಷಕರು ನಮ್ಮ ಸಂಸ್ಥೆಯ ಶಿಕ್ಷಣ ಮತ್ತು ಇಲ್ಲಿನ ಸಂಸ್ಕೃತಿ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬಹದು ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿಶ್ವದ ಯಾವ ದೇಶಕ್ಕೆ ಹೋಗಿ ವಿದ್ಯೆ ಕಲಿತರೂ ಭಾರತಕ್ಕೆ ವಾಪಸ್ಸಾಗಿ ಈ ಮಣ್ಣಿನ ಋಣ ತೀರಿಸುವಂತೆ ಮಗನಿಗೆ ಹೇಳಿದ್ದು ಈಗ ಸಾರ್ಥಕವಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಶೈನಿಂಗ್ ಶಾಲೆಯ ಮುಖ್ಯಸ್ಥ ಮಹೇಂದ್ರ ಕಂಠಿ ಅವರ ಸಹಕಾರದಿಂದ ಅಮೆರಿಕದ ಯೂನಿವರ್ಸಿಟಿ ಜತೆ ಒಳ್ಳೆಯ ಒಪ್ಪಂದ ಏರ್ಪಟ್ಟಿದೆ. ಆ ಯೂನಿವರ್ಸಿಟಿಯ ಮುಖ್ಯಸ್ಥರು 2109ರಲ್ಲೇ ಇಲ್ಲಿಗೆ ಬಂದು ನಮ್ಮ ಶಿಕ್ಷಣ ಸಂಸ್ಥೆ ನೋಡಿಕೊಂಡು ಹೋಗಿದ್ದರು. ಆದರೆ ಕರೊನಾ ಕಾರಣದಿಂದಾಗಿ ಈವರೆಗೂ ಒಪ್ಪಂದ ಏರ್ಪಟ್ಟಿರಲಿಲ್ಲ. ಈಗ ಸಾಧ್ಯವಾಗಿರುವುದು ಸಂತಸ ತಂದಿದೆ ಎಂದರು.