

ಮಂಡ್ಯ: ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಲೀಕತ್ವದ ಪಾಂಡವಪುರ ತಾಲೂಕು ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಮೆರಿಕಾದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ಎಸ್‌ಟಿಜಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಮತ್ತು ಅಲ್ಲಿನ ವಿದ್ಯಾರ್ಥಿಗಳು ಇಲ್ಲಿ ಕೆಲ ದಿನ ಶೈಕ್ಷಣಿಕ ವ್ಯವಸ್ಥೆಯ ಪರಿಚಯ ಮಾಡಿಕೊಳ್ಳಲಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಶಿಕ್ಷಣ ಪದ್ದತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಎಸ್‌ಟಿಜಿ ಸಂಸ್ಥೆ ಇಂತಹದೊಂದು ವಿಶೇಷ ಕಾರ್ಯಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಟ್ರಸ್ಟಿ ತನುಶ್ರೀ ಶಿವರಾಜು ಅವರು ಅಮೇರಿಕದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯಲ್ಲಿ ಡೀನ್ ಡಾ.ಜೇಮ್ಸ್ ಹಾಗೂ ಪ್ರೊ.ಡೇವಿಡ್ ಸೇರಿದಂತೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ‘ವಿದ್ಯಾರ್ಥಿ ವಿನಿಮಯ’ಕ್ಕೆ ಸಹಿ ಹಾಕಿದ್ದಾರೆ.
ಇದರೊಂದಿಗೆ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯೊಂದಿಗೆ ವಿದ್ಯಾರ್ಥಿ ವಿನಿಮಯಕ್ಕೆ ಒಪ್ಪಂದ ಮಾಡಿಕೊಂಡ ರಾಜ್ಯದ ಬೆರಳೆಣಿಕೆಯಷ್ಟು ಶಿಕ್ಷಣ ಸಂಸ್ಥೆಯ ಸಾಲಿಗೆ ಎಸ್‌ಟಿಜಿ ಕೂಡ ಸೇರಿದ ಹೆಗ್ಗಳಿಕೆ ಹೊಂದಿದಂತಾಗಿದೆ. ಸಿ.ಎಸ್.ಪುಟ್ಟರಾಜು ಅವರ ಸಲಹೆಯಂತೆ ಸಿ.ಪಿ.ಶಿವರಾಜು ಅವರು ಅಮೆರಿಕಾ ವಿವಿಯೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದರು. ಅದರಂತೆ ಒಪ್ಪಂದ ಒಪ್ಪಿಗೆ ನೀಡಿದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಯ ಡೀನ್ ಡಾ.ಜೇಮ್ಸ್, ಪ್ರೊ.ಡೇವಿಡ್ ಅವರು 2022 ಜುಲೈ ತಿಂಗಳಲ್ಲಿ ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಆಗಮಿಸಿದರು. ಮಾತ್ರವಲ್ಲದೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಅಮೆರಿಕಾಕ್ಕೆ ತೆರಳಿ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನು ಒಪ್ಪಂದದ ಪ್ರಕಾರ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಅಮೆರಿಕಾದ ಸಾಗಿನಾವ್ ವ್ಯಾಲಿ ಯೂನಿವರ್ಸಿಟಿಗೆ ಹೋಗಿ ಸುಮಾರು 15 ದಿನ ಅಲ್ಲಿನ ಶಿಕ್ಷಣ ವ್ಯವಸ್ಥೆ, ಗುಣಮಟ್ಟ, ಅಲ್ಲಿನ ಶಾಲೆಗಳಲ್ಲಿ ದೊರೆಯುವ ಮೂಲ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಅದೇ ರೀತಿ ಅಮೆರಿಕಾ ವಿವಿಯ ನಾಲ್ವರು ವಿದ್ಯಾರ್ಥಿಗಳು ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಆಗಮಿಸಿ ಇಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ಅಮೆರಿಕಾಕ್ಕೆ ತೆರಳುವ ಎಲ್ಲ ಖರ್ಚು ವೆಚ್ಚವನ್ನು ಶಿಕ್ಷಣ ಸಂಸ್ಥೆಯೇ ಭರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ.