

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ಹೆಸರಿನಲ್ಲಿ ಆರಂಭಿಸಿದ್ದ ಡಾ. ಮಲ್ಲಿಕಾರ್ಜುನ ಮನಸೂರ ಸಂಗೀತ ಪಾಠ ಶಾಲೆಯನ್ನು ಜೂನ್ ತಿಂಗಳಿಂದ ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯಕ್ಕೆ ಧಾರವಾಡದಲ್ಲಿರುವ ಇತಿಹಾಸ ಮಹತ್ವ ಮತ್ತು ಅವಕಾಶಗಳು ಬೇರೆ ಜಿಲ್ಲೆಗಳಲ್ಲಿ ಕಡಿಮೆ. ಡಾ.ಮಲ್ಲಿಕಾರ್ಜುನ ಮನಸೂರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಸಂಗೀತ ಕಚೇರಿ ಆಯೋಜಿಸಲು ಕ್ರಿಯಾಯೋಜನೆ ರೂಪಿಸಬೇಕು. ಹಿಂದೂಸ್ತಾನಿ ಸಂಗೀತ ಪರಂಪರೆ ಮುಂದುವರಿಯಲು ಮನಸೂರ ಟ್ರಸ್ಟ್ದಿಂದ ಕ್ರಿಯಾಶೀಲವಾದ ಕಾರ್ಯ ಚಟುವಟಿಕೆ ಆಯೋಜಿಸಲಾಗುತ್ತದೆ ಎಂದರು.
ಪಂ. ಎಂ. ವೆಂಕಟೇಶಕುಮಾರ ಅವರಂತಹ ದಿಗ್ಗಜರು ಟ್ರಸ್ಟ್ ಸದಸ್ಯರಾಗಿದ್ದಾರೆ. ಅವರ ಸಲಹೆ, ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುವುದು. ಕೆಲ ಸದಸ್ಯರ ನಿಧನದಿಂದ ಟ್ರಸ್ಟ್ ಕಾರ್ಯಕಾರಿಗೆ ಹೊಸ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ಸಭೆಯ ನಡಾವಳಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 10ರಂದು ಸಂಘಟಿಸಲು ತಿಳಿಸಿದ ಅವರು, ಶ್ರೀಘ್ರ ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಟ್ರಸ್ಟ್ಗಳ ಸಭೆ ನಡೆಸಿ, ಟ್ರಸ್ಟ್ಗಳ ಆಶಯಗಳಿಗೆ ಅನುಗುಣವಾಗಿ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.
ಟ್ರಸ್ಟ್ ಸದಸ್ಯರಾದ ಪಂ. ಎಂ. ವೆಂಕಟೇಶಕುಮಾರ, ಡಾ. ದಿಲೀಪ್ ದೇಶಪಾಂಡೆ, ಶಂಕರ ಕುಂಬಿ, ಅಕ್ಕಮಹಾದೇವಿ ಆಲೂರ ಸಲಹೆ, ಸೂಚನೆ ನೀಡಿದರು. ನಾಮ ನಿರ್ದೇಶಿತ ಸರ್ಕಾರಿ ಇಲಾಖೆಗಳ ಪರ ಪೊಲೀಸ್ ಅಧಿಕಾರಿ ಪ್ರಮೋದ ಎಲಿಗಾರ, ಸಹಾಯಕ ವಾರ್ತಾಧಿಕಾರಿ ಡಾ. ಸುರೇಶ ಹಿರೇಮಠ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ, ಇತರರು ಇದ್ದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು.