ಸವಿತಾ ಸಮಾಜಕ್ಕೆ ಅಗತ್ಯ ಸೌಲಭ್ಯ ನೀಡಲು ಕ್ರಮ

5 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ತಮ್ಮ ಅಭಿವೃದ್ಧಿಗೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ಸೌಲಭ್ಯ ಪಡೆಯಲು ಬಂದಲ್ಲಿ ಸರ್ಕಾರ ಮತ್ತು ತಮ್ಮ ಪ್ರತಿಷ್ಠಾನದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.

ನಗರದ ಆಲೂರು ವೆಂಕಟರಾವ್​ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ ವರ್ಣಗಳಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ತಮ್ಮ ಅನುಭವ ಮಂಟಪದಲ್ಲಿ ಪ್ರತಿ ಸಮಾಜ ಅಥವಾ ವೃತ್ತಿಗಳ ಪ್ರತಿನಿಧಿಯಾಗಿ ಇವರನ್ನು ಆಹ್ವಾನಿಸಿ, ಸಮಾನತೆ ಸಾಧಿಸಿದ್ದರು. ಡಾ.ಬಾಬಾಸಾಹೇಬ ಅಂಬೇಡ್ಕರ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡುವ ಮೂಲಕ ಎಲ್ಲರಲ್ಲೂ ಸಮಾನತೆ ತಂದಿದ್ದಾರೆ ಎಂದರು.

ಕಾರ್ಮಿಕ ಇಲಾಖೆಯಿಂದ ವಿವಿಧ ವೃತ್ತಿಯ ಸಮಾಜಗಳನ್ನು ಗುರುತಿಸಿ, ವ್ಯಕ್ತಿಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ, ಕಾರ್ಮಿಕ ಕಾರ್ಡ್​ ನೀಡಿ, ಆರ್ಥಿಕ ಹಾಗೂ ಇತರ ಸಹಾಯ ಮಾಡಲಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪುತ್ತಿವೆ. ಸಮಾಜ ಕಟ್ಟುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಜನರು ಸಂಘಟಿತರಾಗಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ನಾವು ಆಚರಿಸುವ ಹಲವು ಜಯಂತಿಗಳಿಂದ ಸಮಾಜದ ವೈಶಿಷ್ಟತೆ, ಸಂಸ್ಕೃತಿ, ಕಲೆ, ವಿದ್ಯೆ ತಿಳಿಯುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡರೆ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಮಕ್ಕಳಿಗೆ ನೈತಿಕತೆ ತಿಳಿಸಬೇಕು. ಸವಿತಾ ಮಹರ್ಷಿಗಳು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದರೆ, ಜಯಂತಿಗೆ ಅರ್ಥ ಸಿಕ್ಕಂತಾಗುತ್ತದೆ ಎಂದರು.

ರಾಘವೇಂದ್ರ ನೀಲನ್ನವರ ಉಪನ್ಯಾಸ ನೀಡಿದರು. ಕೃಷ್ಣಾ ಉಪ್ಪೇರ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.

ಪರಶುರಾಮ ಬದ್ದೆಪಲ್ಲೆ, ಮೋಹನ ಗೋಲಿ, ಬುಚ್ಚಣ್ಣ ಮುಶ್ರಿಪಲ್ಲೆ, ಎಸ್​.ಆರ್​.ಪಾಟೀಲ, ಜೀವನ್​, ಇತರರು ಇದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net