ಅಸುರಕ್ಷಿತ ಔಷಧ ಮಾರುಕಟ್ಟೆಗೆ ಬಾರದಂತೆ ಕ್ರಮ

Published on

ಚನ್ನರಾಯಪಟ್ಟಣ: ರಾಜ್ಯದಲ್ಲಿ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ಅಸಾಮಾನ್ಯ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧ್ಯಪ್ರದೇಶ ಸಿರಪ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲೂ ಈಗ ಎರಡು ಸಿರಫ್ ಮಾದರಿಗಳು ಪತ್ತೆಯಾಗಿವೆ. ಇಂದು ಸಾರ್ವಜನಿಕರಿಗೆ ನಮ್ಮ ಮಾರ್ಗಸೂಚಿ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆ ನೀಡಲಾಗುತ್ತದೆ. ಕಾಫ್ ಸಿರಫ್ ತಯಾರಿಸುವ ಬೇರೆ ಕಂಪನಿಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಒಂದೆರಡು ದಿನಗಳಲ್ಲಿ ಅದರ ವರದಿ ಬರುತ್ತದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಸುರಕ್ಷಿತ ಔಷಧ ಮಾರುಕಟ್ಟೆಗೆ ಬಾರದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

minister dinesh gundu rao

ಔಷಧಗಳ ವ್ಯವಹಾರದಲ್ಲಿ ಪಾರದರ್ಶಕತೆ ತರುವುದು ಅತ್ಯವಶ್ಯಕ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಕಾಫ್ ಸಿರಫ್ ತಯಾರಿಕಾ ಘಟಕಗಳು ಮತ್ತು ಸರಬರಾಜುದಾರರ ನಡುವೆ ಸಂವಹನದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ತಯಾರಕರು ಒಂದೇ ಕಡೆ ಇರುತ್ತಾರೆ, ಸರಬರಾಜು ಬೇರೆ ಕಡೆ ನಡೆಯುತ್ತದೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೂ ಮಾಹಿತಿ ಹಂಚಿಕೊಳ್ಳಬೇಕು ಎಂದರು.

ಪತ್ತೆಯಾದ ಕಾಫ್ ಸಿರಪ್ ಕರ್ನಾಟಕದಲ್ಲಿ ಸರಬರಾಜಾಗಿಲ್ಲ. ಆದರೆ ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ ಹಾಗೂ ಒಡಿಶಾದಲ್ಲಿ ಬಳಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಸಿರಫ್‌ಗಳಲ್ಲಿ ಡೈ ಎಥಿಲಿನ್ ಕಾಲ್ ಎಂಬ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದೆ. ಮಕ್ಕಳಿಗೆ ಕಾಫ್ ಸಿರಪ್ ನೀಡುವಾಗ ಪಾಲಕರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್ ನೀಡುವ ಮೊದಲು ವೈದ್ಯರ ಸಲಹೆ ಅವಶ್ಯ ಎಂದು ಸಚಿವರು ಎಚ್ಚರಿಸಿದರು.

ಆರೋಗ್ಯ ಇಲಾಖೆ ರಾಜ್ಯಾದ್ಯಂತ ಮಾದರಿ ಸಂಗ್ರಹಣೆ ಮತ್ತು ಪರಿಶೀಲನೆ ಕಾರ್ಯವನ್ನು ವೇಗಗೊಳಿಸಿದ್ದು, ಯಾವುದೇ ಅಸುರಕ್ಷಿತ ಔಷಧ ಪತ್ತೆಯಾದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ರಾಜ್ಯದಲ್ಲಿ 1,800 ಹೊಸ ವೈದ್ಯರ ನೇಮಕಾತಿ ಮಾಡಲಾಗಿದೆ. ಪಿಜಿ ವೈದ್ಯರ ನೇಮಕಾತಿ ಸಂಬಂಧ ಕೂಡ ಕ್ರಮ ವಹಿಸಲಾಗಿದೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರು ಗಮನ ಹರಿಸಿರಲಿಲ್ಲ, ನಮ್ಮ ಸರ್ಕಾರ ಬಂದ ಬಳಿಕ ಅಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಮಿನರಲ್ ವಾಟರ್ ತಯಾರಿಗೆ ಸಂಬಂಧ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವು ಆ ಸಮಾಜಕ್ಕೆ ಬಿಟ್ಟ ವಿಷಯ. ನಾನು ಆ ಸಮಾಜದ ಪ್ರತಿನಿಧಿಯಲ್ಲ. ಅವರ ಬೇಡಿಕೆ ಆಧಾರದ ಮೇಲೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಈಗ ತೀರ್ಮಾನ ಮಾಡುವ ಅಧಿಕಾರ ಕೇಂದ್ರ ಸರ್ಕಾರದದಾಗಿದೆ. ಒಂದು ಗುಂಪು ನಾವು ಪ್ರತ್ಯೇಕ ಧರ್ಮ ಎಂದು ಹೇಳುತ್ತದೆ, ಮತ್ತೊಂದು ಗುಂಪು ವೀರಶೈವ ಲಿಂಗಾಯತರು ಹಿಂದು ಧರ್ಮದ ಅಡಿಯಲ್ಲೇ ಬರುತ್ತೇವೆ ಎಂದು ಹೇಳುತ್ತದೆ. ಈ ವಿಷಯದಲ್ಲಿ ಸರ್ಕಾರ ಅಥವಾ ಪಕ್ಷ ಹಸ್ತಕ್ಷೇಪ ಮಾಡದಿರಲು ತೀರ್ಮಾನಿಸಿದೆ ಎಂದರು.

ಬಸವಣ್ಣ ಅವರ ಸಿದ್ಧಾಂತಗಳು ಲಿಂಗಾಯತರಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರಿಗೂ ಮಾದರಿ. ಬಸವ ತತ್ವವನ್ನು ಅನುಸರಿಸಲು ಲಿಂಗಾಯತ ಅಥವಾ ವೀರಶೈವ ಆಗಬೇಕೆಂಬುದಿಲ್ಲ. ಸಾಮಾಜಿಕ ಸಮಾನತೆ ಮತ್ತು ವೈಜ್ಞಾನಿಕ ಚಿಂತನೆಗೆ ನೆಲೆ ಬೆಳೆಸಿದವರು ಬಸವಣ್ಣ ಅವರ ಹೆಸರನ್ನು ಒಂದು ಮೆಟ್ರೋ ಸ್ಟೇಷನ್‌ಗೆ ಇಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುತ್ತದೆ ಎಂದು ನಂಬಿದ್ದೇನೆ ಎಂದರು.

ನಾನೂ ಕೂಡ ಜಾತಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದೇನೆ, ಪ್ರಶ್ನೆಗಳನ್ನು ಸರಿಯಾಗಿ ಕೇಳಿದಾಗ ಮಾತ್ರ ಸರಿಯಾದ ಮಾಹಿತಿ ಸಿಗಲು ಸಾಧ್ಯ. ಕೆಲವು ಪ್ರಶ್ನೆಗಳು ಹಾಗೆ ಅನ್ನಿಸಬಹುದು, ಆದರೆ ಯಾರಿಗೆ ಮೀಸಲಾತಿ ಸಿಕ್ಕಿದೆ, ಸರ್ಕಾರದ ಸೌಲಭ್ಯ ಸಿಕ್ಕಿದೆ ಎನ್ನುವುದು ಮುಖ್ಯ. ಹಾಗಾಗಿ ಎಲ್ಲ ರೀತಿಯ ಪ್ರಶ್ನೆಗಳು ಅನಿವಾರ್ಯ ಎಂದರು.

ಸಿಎಂ ಬದಲಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಬಸವರಾಜ ರಾಯರೆಡ್ಡಿ ಅವರಂತೆಯೇ ಅನೇಕರು ಆಕಾಂಕ್ಷಿಗಳಾಗಿರಬಹುದು. ನಾನೂ ಆಕಾಂಕ್ಷಿ ಅಂತ ಹೇಳಬಹುದು. ಆದರೆ ತೀರ್ಮಾನ ಹೈಕಮಾಂಡ್ ಅವರದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇದ್ದಾರೆ, ಹೈಕಮಾಂಡ್ ತೀರ್ಮಾನದ ಪ್ರಕಾರವೇ ಸರ್ಕಾರ ನಡೆಯುತ್ತಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ, ಕೆಲವರ ಹೇಳಿಕೆಗಳಿಂದ ಈ ವಿಷಯ ಬಂದಿಟ್ಟಿದೆ. ವಾಸ್ತವದಲ್ಲಿ ನಮ್ಮ ರಾಷ್ಟ್ರ ಮಟ್ಟದ ಕಾಂಗ್ರೆಸ್‌ನಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆಯೇ ಆಗಿಲ್ಲ. ಸಿಎಂ ಅವರು ಇದ್ದಾಗ ಇನ್ನೊಬ್ಬರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net