

ತಿ.ನರಸೀಪುರ: ಅಧಿಕಾರಿಗಳಿಂದ ಅನುಮತಿ ಪಡೆದು ತಲಕಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರದ ಜತೆಗೆ ಕೀಟನಾಶಕ ಮಾರಾಟ ಕೇಂದ್ರವನ್ನು ತೆರೆಯಲಾಗುವುದು ಎಂದು ಅಧ್ಯಕ್ಷ ಟಿ.ಎನ್.ಅಶೋಕ್ ಪಟೇಲ್ ಹೇಳಿದರು.
ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಕೀಟನಾಶಕ ಮಾರಾಟ ಕೇಂದ್ರವನ್ನು ತೆರೆಯುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಷೇರುದಾರರಾಗಿರುವ ರೈತರೆಲ್ಲರೂ ಸಂಘದಲ್ಲಿಯೇ ವ್ಯವಹರಿಸುವಂತಾದರೆ ಕೀಟನಾಶಕ ಮಾರಾಟ ಕೇಂದ್ರವನ್ನು ಖಂಡಿತವಾಗಿಯೂ ತೆರೆಯುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ಸಂಘದಲ್ಲಿನ ರಸಗೊಬ್ಬರ ಮಾರಾಟದ ಸೌಲಭ್ಯವನ್ನು ಕಲ್ಪಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ರೈತರು ವ್ಯವಹರಿಸುತ್ತಿಲ್ಲ. ಹೋಬಳಿ ಕೇಂದ್ರದ ತಲಕಾಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಸ್ಥಳೀಯವಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಆಡಳಿತ ಮಂಡಳಿ ಬದ್ಧವಾಗಿದೆ. ಸಂಘದಿಂದ ಎಲ್ಲ ಸದಸ್ಯರಿಗೂ ಸಾಲ ವಿತರಣೆ ಮಾಡುವ ಉದ್ದೇಶವಿದ್ದು, 1 ಕೋಟಿ ರೂ. ಸಾಲ ನೀಡುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಟಿ.ಎನ್.ಅಶೋಕ್ ಪಟೇಲ್ ತಿಳಿಸಿದರು.
ಕಾರ್ಯನಿರ್ವಾಹಕ ಟಿ.ವಿ.ಕುಮಾರ್ ಮಾತನಾಡಿ, ಸಾಲ ವಸೂಲಾತಿ ಸುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಸಂಘವು 2024-25ನೇ ಸಾಲಿನಲ್ಲಿ 4.32 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಮುಂದಿನ 2025-26ನೇ ಸಾಲಿಗೆ 34 ಲಕ್ಷ ರೂ.ಗಳ ಅಂದಾಜು ಬಜೆಟ್ ರೂಪಿಸಲಾಗಿದೆ ಎಂದು ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಿ.ರಾಜಣ್ಣ, ನಿರ್ದೇಶಕರಾದ ಟಿ.ಎನ್.ರಂಗನಾಥ್, ಟಿ.ಎಂ.ದಿನೇಶ್, ಟಿ.ವಿ.ಉಮೇಶ್, ಟಿ.ಡಿ.ಉಮಾಶಂಕರ್, ಟಿ.ವಿ.ಧನಂಜಯ, ಟಿ.ಎನ್.ಚಲುವರಾಜು, ಟಿ.ಆರ್.ನರೇಂದ್ರ, ಎನ್.ಭಾಗ್ಯಮ್ಮ, ಇಂದ್ರಮ್ಮ, ಸೇರಿದಂತೆ ಸಂಘದ ಷೇರುದಾರ ಸದಸ್ಯರು, ರೈತರು ಇದ್ದರು.