

ಹುಣಸೂರು: ಮುಂದಿನ 4 ವರ್ಷಗಳಲ್ಲಿ ತಾಲೂಕಿನಲ್ಲಿ ಕನಿಷ್ಠ 20 ಆದಿವಾಸಿ ಯುವಕರು ಪತ್ರಕರ್ತರಾಗುವತ್ತ ಡೀಡ್ ಸಂಸ್ಥೆ ಕ್ರಮ ವಹಿಸಲಿದೆ ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ತಿಳಿಸಿದರು.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಆದಿವಾಸಿ ಯುವಕರು ಮತ್ತು ಪತ್ರಿಕೋದ್ಯಮ ಕುರಿತಾದ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ಆದಿವಾಸಿ ಯುವಕರು ನಾಗರಿಕ ಪತ್ರಕರ್ತ(ಸಿಟಿ ಜರ್ನಲಿಸ್ಟ್)ರಾಗುವ ಮೂಲಕ ತಮ್ಮ ಹೋರಾಟಗಳಿಗೆ ತಾರ್ಕಿಕ ಅಂತ್ಯ ನೀಡಲು ಮುಂದಾಗಬೇಕಿದೆ. ಆಳುವ ಸರ್ಕಾರಗಳಿಂದ ಬಹಳಷ್ಟು ಶೋಷಣೆಗೆ ಒಳಗಾಗುತ್ತಿರುವ ಈ ನೆಲದ ಮೂಲನಿವಾಸಿಗಳು ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಲು 5 ದಶಕಗಳಿಂದ ಪಾಡು ಪಡುತ್ತಿದ್ದಾರೆ. ಸರ್ಕಾರಗಳು ಅನುದಾನವನ್ನು ಕೋಟಿಗಟ್ಟಲೇ ಕೊಡುತಿರುವುದು ಸರಿ. ಆದರೆ ಅದು ಯಾರ ಕೈಸೇರುತ್ತಿದೆ ಎನ್ನುವುದೇ ಇಂದಿಗೂ ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದು ಬೇಸರಿಸಿದರು.
ಆದಿವಾಸಿಗಳು ತಮ್ಮ ಅರಣ್ಯಹಕ್ಕಿಗಾಗಿ, ವೈಯಕ್ತಿಕ, ಸಾಮೂಹಿಕ, ನೆಲೆಗಳ ಹಕ್ಕಿಗಾಗಿ ಹೋರಾಡುತ್ತಲೇ ಇದ್ದಾರೆ. ಕಾಡಿನಿಂದ ಹೊರಬಂದ ಆದಿವಾಸಿಗಳು ಅತಂತ್ರ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಆಳ, ಅಗಲದ ಅರಿವು ನಗರದ ನಾಗರಿಕರಿಗಿಂತ ನಿಮಗೆ ಹೆಚ್ಚಾಗಿ ತಿಳಿದಿರುತ್ತದೆ. ಅದನ್ನು ಸಂವಹಿಸುವ ಪ್ರಕ್ರಿಯೆಯಲ್ಲಿ ನೀವು ಹಿಂದೆ ಬಿದ್ದಿದ್ದೀರಿ. ಇದೀಗ ಆದಿವಾಸಿ ಯುವಸಮೂಹ ಸಾಕಷ್ಟು ಎಚ್ಚೆತ್ತುಕೊಂಡಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಡಿಜಿಟಲ್ ಮಾಧ್ಯಮ ಕೂಡ ಬಲವಾಗಿದೆ. ನೀವು ನಿಮ್ಮ ಹಾಡಿಯಲ್ಲಿ ನಾಗರಿಕ ಪತ್ರಕರ್ತರಾಗುವ ಮೂಲಕ ನಿಮ್ಮ ಸಮಸ್ಯೆಗಳನ್ನು ಸಮಾಜದ ಬೆಳಕಿಗೆ ತರುವ ಕಾರ್ಯ ಪರಿಣಾಮಕಾರಿಯಾಗಿ ಮಾಡಬೇಕಿದೆ. ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡು ಆ ಮೂಲಕ ಸರ್ಕಾರಗಳ ಕಣ್ಣು ತೆರೆಸುವ ಕಾರ್ಯ ಮಾಡಿದಲ್ಲಿ ನಿಮ್ಮ ಶತಮಾನಗಳ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಡೀಡ್ ಸಂಸ್ಥೆ ಆದಿವಾಸಿ ಯುವಕರಿಗಾಗಿ ಪತ್ರಿಕೋದ್ಯಮ ತರಬೇತಿ ಕಾರ್ಯಾಗಾರ ಕೈಗೊಂಡಿದೆ ಎಂದು ತಿಳಿಸಿದರು.
ಪೊನ್ನಂಪೇಟೆ ತಾಲೂಕು ಅತ್ತೂರುಕೊಲ್ಲಿ ಹಾಡಿಯ ಆದಿವಾಸಿ ಯುವ ಮುಖಂಡ ಜೆ.ಎ. ಶಿವು ಮಾತನಾಡಿ, ಇಂದಿನ ದಿನಗಳಲ್ಲಿ ಆದಿವಾಸಿಗಳ ಸಮಸ್ಯೆಗಳನ್ನು ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಹೆಚ್ಚು ಗಂಭೀರತೆಯೊಂದಿಗೆ ಪ್ರಕಟಿಸುತ್ತಿರುವುದು ಸರಿಯಷ್ಟೆ. ಅದಕ್ಕೆ ಆದಿವಾಸಿ ಸಮುದಾಯ ಋಣಿಯಾಗಿದೆ. ಅದರೊಂದಿಗೆ ಕೆಲ ಸರಿ ತಪ್ಪುಗಳನ್ನೂ ನಾವು ನೋಡುತ್ತಿದ್ದೇವೆ. ಇದನ್ನು ನಿವಾರಿಸಲು ಆದಿವಾಸಿ ಯುವಕರೇ ಪತ್ರಕರ್ತರಾಗುವ ಅನಿವಾರ್ಯತೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗ ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. ನಮ್ಮ ಸಮಸ್ಯೆಗಳಿಗೆ ನಾವೇ ಪತ್ರಕರ್ತರಾಗಿ ಸರ್ಕಾರಗಳ ಕಿವಿಹಿಂಡುವ ಕಾರ್ಯಮಾಡೋಣ ಎಂದರು.
ಕಾರ್ಯಾಗಾರದ ವೇಳೆ ವಿಜಯವಾಣಿ ಪತ್ರಿಕೆಯಲ್ಲಿ ಸೋಮವಾರ ಅಧಿಕಾರಿಗಳು-ಆದಿವಾಸಿಗಳ ಸಂಘರ್ಷ ತಾರಕಕ್ಕೆ ಶೀರ್ಷಿಕೆಯಡಿ ಪ್ರಕಟಗೊಂಡಿರುವ ವಿಶೇಷ ಲೇಖನದ ಸಂಚಿಕೆಯನ್ನು ಗಿರಿಜನರಿಗೆ ಹಂಚಲಾಯಿತು.
ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಪತ್ರಕರ್ತ ಮೋಹನ್ ಮೈಸೂರು, ಹಿರಿಯ ಮುಖಂಡರಾದ ವಿಠಲ್ ನಾಣಾಚ್ಚಿ, ಸಣ್ಣಯ್ಯ, ಶಾರದಾ ವಳಗೇರಿ, ಆದಿವಾಸಿ ಯುವ ಮುಖಂಡರಾದ ಜೆ.ಆರ್.ರಾಕೇಶ್, ಚಿಕ್ಕಮಾರ, ರಾಮಕೃಷ್ಣ, ಸಿಂಚನಾ, ಲಕ್ಷ್ಮೀ, ಕಾಂತು, ಮರದೂರು ಶ್ರೀಕಂಠ ಪಾಲ್ಗೊಂಡಿದ್ದರು.