

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ರೇಷ್ಮೆ ಕೃಷಿ ಕೇಂದ್ರಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜತೆಗೆ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.
ಬೆಟ್ಟದಲ್ಲಿ ರೇಷ್ಮೆ ಕೃಷಿ ಕೇಂದ್ರಕ್ಕೆ ಸೇರಿದ ಒಟ್ಟು 38 ಎಕರೆ ಜಾಗವಿದ್ದು, ಇದು ಆನೆ ಕಾರಿಡಾರ್ ಪ್ರದೇಶವಾಗಿದೆ. ಇಲ್ಲಿ ಕಾಡುಪ್ರಾಣಿಗಳ ಹಾವಳಿ ಇದ್ದು, ಇವುಗಳ ಉಪಟಳ ತಡೆಯಲು ಸೋಲಾರ್ ತಂತಿ ಬೇಲಿ ಅಳವಡಿಸಲಾಗಿತ್ತು. ಇದೀಗ ಇದು ಹಾಳಾಗಿರುವುದರಿಂದ ರೈಲ್ವೆ ಬ್ಯಾರಿಕೇಡ್ ಅವಶ್ಯವಿದೆ. ಅಲ್ಲದೆ ರೇಷ್ಮೆ ಕಾರ್ಖಾನೆಯ ಕಟ್ಟಡಗಳು ಶಿಥಿಲಗೊಂಡಿದ್ದು, ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಹಾಗಾಗಿ ರೇಷ್ಮೆ ಕೃಷಿ ಕೇಂದ್ರವನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು.
ರೇಷ್ಮೆ ಬೆಳೆಗೆ ಪ್ರೋತ್ಸಾಹ: ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಹಿಂದೆ ಚಾಮರಾಜನಗರ ರೇಷ್ಮೆ ಬೆಳೆಗೆ ಹೆಸರುವಾಸಿಯಾಗಿತ್ತು. ಕಾಲಕ್ರಮೇಣ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅಭಿವೃದ್ಧಿಯಿಂದ ರೇಷ್ಮೆ ಬೆಳೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆ ಯಾಯಿತು ಚೀನಾ ಮತ್ತು ಜಪಾನ್‌ನಲ್ಲಿಯೂ ರೇಷ್ಮೆ ಉತ್ಪಾದನೆ ಕುಸಿತ ಕಂಡಿದ್ದು, ಉತ್ತರ ಕರ್ನಾಟಕದ ರೈತರು ಇದನ್ನು ಬೆಳೆಯುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೂ ರೇಷ್ಮೆ ನೇಕಾರರನ್ನು ಪ್ರೋತ್ಸಾಹಿಸಿ ಉತ್ಪಾದನೆ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಪ್ರಮುಖವಾಗಿ ರೀಲರ್ಸ್‌ಗಳನ್ನು ಪ್ರೋತ್ಸಾಹಿಸಬೇಕಿದ್ದು, ರೇಷ್ಮೆ ಬೆಳೆಗೆ ರೈತರನ್ನು ಉತ್ತೇಜಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಅಭಿವೃದ್ಧಿ ಬಗ್ಗೆ ವಿಸ್ತೃತವಾದ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರೇಷ್ಮೆ ಉತ್ಪಾದನೆ ಹೆಚ್ಚಿಸಲು 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರೇಷ್ಮೆ ಅಭಿವೃದ್ಧಿಗೆ ಅವಶ್ಯವಾಗಿರುವ ಕಾರ್ಯಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ಕೊರತೆಯನ್ನೂ ನೀಗಿಸಲು ಕ್ರಮವಹಿಸಲಾಗುವುದು ಎಂದರು.
ಪಶುಸಂಗೋಪನಾ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಈಗ ಕೆಪಿಎಸ್‌ಸಿ ಮೂಲಕ 400 ಜನರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕೆಪಿಎಸ್‌ಸಿಯಲ್ಲಿ ಕೆಲವು ಗೊಂದಲ ಇರುವ ಕಾರಣ ಭರ್ತಿ ಆಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರನ್ನು ನೇಮಿಸಲು ಕ್ರಮ ವಹಿಸಲಾಗುವುದು. ಅಲ್ಲದೆ 700 ಡಿ. ದರ್ಜೆ ನೌಕರರನ್ನು ಈಗಾಗಲೇ ಪಶು ಇಲಾಖೆಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಎಸ್‌ಪಿ ಡಾ.ಬಿ.ಟಿ.ಕವಿತಾ, ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ದೇಶಕಿ ಶ್ರೀರೂಪಾ, ಜಂಟಿ ನಿರ್ದೇಶಕಿ ಪ್ರತಿಭಾ, ರಿಜಿಸ್ಟ್ರಾರ್ ಡಾ.ಟಿ.ರಾಮೇಗೌಡ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಐ.ಈ.ಬಸವರಾಜು, ಸಿಪಿಐ ಶ್ರೀಕಾಂತ್ ಪಿಎಸ್‌ಐ ಆಕಾಶ್, ವಿಜ್ಞಾನಿಗಳಾದ ಡಾ.ಮಂಜುನಾಥ್, ಡಾ.ರಮೇಶ್, ಡಾ.ಪಿ.ಜೆ.ರಾಜು ಇತರರಿದ್ದರು.