

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವ್ಯಾಸಾಂಗದ ಜ್ಞಾನಾರ್ಜನೆಗೆ ಹಾಗೂ ಅವರ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದಲ್ಲಿ ಕೈಗೊಂಡ ಕ್ರಮಗಳನ್ನು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಶ್ಲಾಘಿಸಿದರು.
ನಗರದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ಕಲಿಕಾ ವೀಡಿಯೋಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಿದೆ. ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಧಾನವಾಗಿ ವಿಜ್ಞಾನದ ಅಧ್ಯಯನಕ್ಕೆ ಅನುಕೂಲವಾಗುವಂತೆ ಪ್ರೌಢ ಶಾಲೆಯ 8, 9 ಮತ್ತು 10 ನೇ ತರಗತಿಗಳ ವಿಜ್ಞಾನ ವಿಷಯದ ಕಲಿಕಾ ಪಠ್ಯ ಕ್ರಮವನ್ನು ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮದಲ್ಲೂ ರೂಪಿಸಿ ವಿದ್ಯಾರ್ಥಿಗಳಿಗೆ ಒದಗಿಸಲು ಕ್ರಮಕೈಕೊಳ್ಳಲಾಗಿದೆ. ಇದರಿಂದ ಉನ್ನತ ವ್ಯಾಸಾಂಗದ ಸಂದರ್ಭದಲ್ಲಿ ವಿಜ್ಞಾನದ ಆಂಗ್ಲ ಭಾಷಾ ಸಂವಹನ ಸುಲಭವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ವಿದ್ಯಾಕಾಶಿ ಎಂಬ ಗೌರವಕ್ಕೆ ಪಾತ್ರವಾಗಿರುವ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ 10ರೊಳಗೆ ಬರುವಂತೆ ಎಲ್ಲರೂ ಶ್ರಮಿಸಬೇಕು. ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸಚಿವರು ಸರ್ಕಾರದ ಮೂಲಕ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಮಾತನಾಡಿ, ಎಸ್ಸೆಸ್ಸೆಲ್ಸಿ ಸೇರಿ ಒಟ್ಟು ಶಾಲಾ ಶಿಕ್ಷಣದ ಬೋಧನೆ ಕ್ರಿಯಾ ಪ್ರೇರಕವಾಗಲು ಹಾಗೂ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಭಾಗದ 9 ಜಿಲ್ಲೆಗಳ ಅಧಿಕಾರಿಗಳ ಸಭೆ ಜರುಗಿಸಿ ಅವರಿಗೆ ನಿರ್ದಿಷ್ಟ ನೀಲನಕ್ಷೆ ಒದಗಿಸಲಾಗಿದೆ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ, ಜಯಶ್ರೀ ಕಾರೇಕರ, ಹುಬ್ಬಳ್ಳಿ ಗ್ರಾಮೀಣ ಬಿಇಒ ಉಮೇಶ ಬಮ್ಮಕ್ಕನವರ, ಧಾರವಾಡ ಗ್ರಾಮೀಣ ಬಿಇಒ ಆರ್. ಆರ್. ಸದಲಗಿ, ಶಾಂತಾ ಮೀಸಿ, ಅಧಿಕಾರಿಗಳು, ಇತರರು ಇದ್ದರು.