

ತ್ಯಾಮಗೊಂಡ್ಲು: ಗಂಗರಸರ ರಾಜಧಾನಿಯಾಗಿದ್ದ ಮಾನ್ಯಪುರ ಮಣ್ಣೆ ಗ್ರಾಮವನ್ನು ಐತಿಹಾಸಿಕ ಸ್ಥಳಗಳ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಗ್ರಾಮದ ಅಭಿವೃದ್ಧಿಗೆ ಅಗತ್ಯ ಪ್ಯಾಕೇಜ್ ತರಲು ಕ್ರಮವಹಿಸಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನೆಲಮಂಗಲ ತಾಲೂಕು ಮಣ್ಣೆ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತ್ಯಾಮಗೊಂಡ್ಲು&ಮಣ್ಣೆ ರಸ್ತೆ ವಿಸ್ತರಣೆಗೆ 6 ಕೋಟಿ ರೂ. ಟೆಂಡರ್ ಆಗಿದ್ದು, ಕೆಲಸದ ಆದೇಶವೂ ಬಂದಿದೆ. ಇಂಜನಿಯರ್ಗಳಿಂದ ರಸ್ತೆ ಪರಿವೀಕ್ಷಣೆ ಸದ್ಯದಲ್ಲೇ ನಡೆಯಲಿದ್ದು, ಮಾರ್ಗದ ಅಕ್ಕಪಕ್ಕದವರು ಒತ್ತುವರಿ ತೆರವುಗೊಳಿಸಿದರೆ ಕಿರಿದಾದ ರಸ್ತೆ ದೊಡ್ಡದಾಗಿ ನಿರ್ಮಾಣವಾಗಲಿದೆ. ಶ್ರೀದಲ್ಲೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ರಸ್ತೆ ಅಭಿವೃದ್ಧಿ ಆದರೆ ಈ ಭಾಗದ ಜಮೀನುಗಳಿಗೆ ಹೆಚ್ಚಿನ ಬೆಲೆ ಬರುತ್ತದೆ ಎಂದರು.
ಸೋಂಪುರ ಹೋಬಳಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ 30 ಕೋಟಿ ರೂ. ಅನುದಾನದಲ್ಲಿ 10 ಕೋಟಿ ರೂ. ತ್ಯಾಮಗೊಂಡ್ಲು ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲು ಮುಖ್ಯ ಇಂಜನಿಯರ್ಗೆ ತಿಳಿಸಲಾಗಿದೆ ಎಂದು ಶಾಸಕರು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ಎಸ್.ಬಿ.ಬೈರೇಶ್ ಮಾತನಾಡಿ, ಈ ಮುಂಚೆ ಕೈಗಾರಿಕಾ ಪ್ರದೇಶಗಳ ಕಟ್ಟಡಗಳ ತೆರಿಗೆ ಹಣವನ್ನು ಸ್ಥಳಿಯ ಗ್ರಾಪಂಗಳೇ ವಸೂಲು ಮಾಡುವ ಅಧಿಕಾರವಿತ್ತು. ನಂತರ ಕೈಗಾರಿಕೆ ಅಭಿವೃದ್ಧಿ ಮಂಡಳಿ ತೆರಿಗೆ ಸ್ವೀಕರಿಸಿ ಅದನ್ನು ಗ್ರಾಪಂಗಳಿಗೆ ವರ್ಗಾಯಿಸುತ್ತಿತ್ತು. ಆದರೆ ಸರ್ಕಾರ ಹೊಸ ಆದೇಶದಂತೆ ಗ್ರಾಪಂಗಳಿಗೆ ಹಣ ವರ್ಗಾವಣೆಯಾಗುತ್ತಿಲ್ಲ. ಪರಿಣಾಮ ಗ್ರಾಪಂಗಳು ಎಲ್ಲ ಯೋಜನೆಗಳಿಗೆ ಸರ್ಕಾರದ ಅನುದಾನಕ್ಕಾಗಿ ಎದುರು ನೋಡುವಂತಾಗಿದೆ. ಈ ಆದೇಶವನ್ನು ಮಾರ್ಪಡಿಸಿ ಈ ಹಿಂದಿನ ಪದ್ಧತಿಯನ್ನೇ ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಶಾಸಕರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಸದಸ್ಯ ಮಂಜುನಾಥ್ ಮಾತನಾಡಿ, ಕಳೆದ 60 ವರ್ಷಗಳಿಂದ ಗ್ರಾಪಂ ನೂತನ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನೂತನ ಕಟ್ಟಡ ಆಗಲೇಬೇಕೆಂದು ತೀರ್ಮಾನಿಸಿ, ಭೂಮಿ ಪೂಜೆ ನೆರವೇರಿಸಲಾಗಿದ್ದು, 75 ಲಕ್ಷ ರೂ. ಗ್ರಾಪಂ ವರ್ಗ 1ರ ಹಣವಿದೆ. ಮುಂದೆ ಕೈಗಾರಿಕೆಗಳಿಗೆ ಸಿಎಸ್ಆರ್ ಅನುದಾನಕ್ಕೆ ಮನವಿ ಮಾಡಿ, ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದರು.
ಅಹವಾಲು ಸ್ವೀಕಾರ
ಭೂಮಿ ಪೂಜೆ ಬಳಿಕ ಗ್ರಾಮಸ್ಥರ ಅಹವಾಲುಗಳನ್ನು ಶಾಸಕರು ಸ್ವೀಕರಿಸಿದರು. ಮಣ್ಣೆ ಕೆರೆಗೆ ಎತ್ತಿನಹೊಳೆ ನೀರು ಹರಿಸಲು, ಗ್ರಾಮದ ಕಪಿಲೇಶ್ವರ ದೇವಸ್ಥಾನದಿಂದ ಅಪ್ಪುಗೊಂಡನಹಳ್ಳಿ&ಸೋಮಸಾಗರ ರಸ್ತೆಗೆ ಡಾಂಬರ್, ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಶೆಲ್ಟರ್ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಯಿತು.
ಸದಸ್ಯರಾದ ಯಶೋದಮ್ಮ, ತಾವರೆಕೆರೆ ರತ್ನಮ್ಮ, ಬಿ.ಯಶೋಧಮ್ಮ, ಸರೋಜಮ್ಮ, ಸುಪ್ರಿಯಾ.ಆರ್, ಸುರೇಖಾ, ಪಿಡಿಒ ಚಿರಂಜೀವಿ. ಎಸ್, ಕಾರ್ಯದರ್ಶಿ ರಮೇಶ್. ಜಿ, ಮುಖಂಡರಾದ ರಾಮಣ್ಣ, ಸೀತಾರಾಮಯ್ಯ, ಬಗರ್ ಹುಕುಂ ಸಮಿತಿ ಸದಸ್ಯ ಹನುಮಂತೇಗೌಡ, ಎನ್ಡಿಎ ಸದಸ್ಯ ಪ್ರಕಾಶ್ಬಾಬು, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ, ಸೋಂಪುರ ಹೋಬಳಿ ಜೆಡಿಎಸ್ ಅಧ್ಯಕ್ಷ ಮೋಹನ್ ಕುಮಾರ್, ಟಿ.ಎನ್.ಹನುಮಂತರಾಜು, ಚನ್ನಕೃಷ್ಣ, ಕುಮಾರ್, ಟಿ.ಎನ್.ಪ್ರದಿಪ್ ಇದ್ದರು.