ಬಡ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮ: ಭಂವರ್ ಸಿಂಗ್ ಮೀನಾ

MDK10
Published on

ಅರಣ್ಯದಂಚಿನಲ್ಲಿ ನೆಲೆಸಿರುವ ಬಡಜನರ ಮೂಲ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾನದ ಗುರುತಿನ ಚೀಟಿ ಸೇರಿದಂತೆ ಮೂಲ ದಾಖಲೆ ಇಲ್ಲದವರಿಗೆ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಗತ್ಯ ಮೂಲ ದಾಖಲೆ ಒದಗಿಸಲು ವಿಶೇಷ ಶಿಬಿರ ಅ೨೭ ರಂದು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.


ಹೊಸ ಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ ಅವರಿಂದ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಅಧಿಕಾರಿಗಳು ಕಚೇರಿಯಲ್ಲಿ ಇದ್ದುಕೊಂಡು ಜನರ ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ’ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸಲು ಸಹಕಾರಿಯಾಗಿದೆ. ನಾನಾ ಕಾರಣಗಳಿಂದ ರದ್ದಾಗಿರುವ ಪಡಿತರ ಚೀಟಿ ಹಾಗೂ ಇನ್ನಿತರ ಮೂಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.


ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಹಲವು ಬೇಡಿಕೆ ಇದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ತೂಗು ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕುಡಿಯುವ ನೀರಿನ ಗುಣಮಟ್ಟವನ್ನು ತಿಳಿಯಲು ಜಿಲ್ಲಾ ಮಟ್ಟದಲ್ಲಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರು ಕುಡಿಯಲು ಯೋಗವೇ ಎಂದು ಪರೀಕ್ಷಿಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ನೀರಿನ ಮೂಲವನ್ನು ಪರೀಕ್ಷಾ ಕೇಂದ್ರಗಳಿಗೆ ನೀಡುವಂತೆ ಸಾರ್ವಜನಿಕರ ಗಮನಕ್ಕೆ ತಂದರು.


ನಿವೇಶನ ರಹಿತ ಫಲಾನುಭವಿಗಳು ನಿವೇಶನ ರಹಿತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಬಿಟ್ಟು ಹೋಗಿದ್ದಲ್ಲಿ ನಿವೇಶನ ರಹಿತರ ಪಟ್ಟಿಗೆ ನೋಂದಾಯಿಸಿಕೊಳ್ಳಬೇಕು. ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು. ಒಂದು ವೇಳೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಿಟ್ಟು ಹೋಗಿದ್ದರೆ ಅರ್ಜಿ ಸಲ್ಲಿಸಲು ಕ್ರಮ ವಹಿಸುವಂತೆ ತಿಳಿಸಿದರು.


ಐಟಿಡಿಪಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅಗತ್ಯಮೂಲ ದಾಖಲೆಗಳನ್ನು ಒದಗಿಸಲು ವಿಶೇಷ ಶಿಬಿರವನ್ನು ಆಯೋಜಿಸುವಂತೆ ನಿರ್ದೇಶನ ನೀಡಲಾಗಿದೆ. ಆ ನಿಟ್ಟಿನಲ್ಲಿ ಮೂಲ ದಾಖಲೆಗಳನ್ನು ಹೊಂದಿರದ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.


ನಂಜರಾಯಪಟ್ಟಣ ಗ್ರಾ.ಪಂ.ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಮಾನವ ಮತ್ತು ವನ್ಯಜೀವಿ ಸಂಘರ್ಷವೂ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ವತಿಯಿಂದ ಅಳವಡಿಸಲಾಗಿರುವ ರೈಲ್ವೆ ಬ್ಯಾರಿಕೆಡ್ ಹಾಗೂ ಹ್ಯಾಂಗಿಂಗ್ ಸೋಲಾರ್ ಕಾಮಗಾರಿಯು ಅವೈಜ್ಞಾನಿಕತೆಯಿಂದ ಕೂಡಿದೆ. ಇದರಿಂದ ವನ್ಯಜೀವಿಗಳು ಗ್ರಾಮಕ್ಕೆ ಬಂದು ರೈತರು ಬೆಳೆದ ಬೆಳೆ ನಾಶ ಮಾಡುತ್ತಿದೆ. ಮೀನುಕೊಲ್ಲಿ ಭಾಗದಲ್ಲಿ ಅಳವಡಿಸಲಾಗಿರುವ ಹ್ಯಾಂಗಿಂಗ್ ಸೋಲಾರ್ ಅಳವಡಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಈ ಭಾಗದಲ್ಲಿ ರೈಲ್ವೆ ಬ್ಯಾರಿಕೆಡ್ ಅನ್ನು ಅಳವಡಿಸುವಂತೆ ಮನವಿ ಮಾಡಿದರು.


ಗ್ರಾ.ಪಂ.ವ್ಯಾಪ್ತಿಯಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ನಿವೇಶನ ಇರುವುದಿಲ್ಲ. ಹಲವಾರು ಜನರ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದು. ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು. ದುಬಾರೆ ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಆನೆ ಶಿಬಿರಕ್ಕೆ ಹೊಳೆ ದಾಟಿ ಹೋಗಲು ಆ ಭಾಗದಲ್ಲಿ ತೂಗು ಸೇತುವೆಯನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದರು.


ಪ್ರಮುಖರಾದ ಆರ್.ಕೆ.ಚಂದ್ರ ಮಾತನಾಡಿ, ದುಬಾರೆಯಿಂದ ಆನೆ ಶಿಬಿರಕ್ಕೆ ಹೋಗಲು ತೂಗು ಸೇತುವೆಯನ್ನು ನಿರ್ಮಾಣ ಮಾಡಿಕೊಡಬೇಕು. ಇದರಿಂದ ಆ ಭಾಗದಲ್ಲಿ ವಾಸಿಸುವ ಗಿರಿ ಜನರಿಗೆ ಹಾಗೂ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಇನ್ನಿತರ ಚಟುವಟಿಕೆಗಳಿಗೆ ಸಹಕಾರಿ ಆಗಬಹುದು. ಕುಶಾಲನಗರ ತಾಲೂಕು ಕೇಂದ್ರ ಆಗಿರುವುದರಿಂದ ಸರ್ಕಾರದ ಸೇವೆ, ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.


ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ಪ್ರಕಾಶ್‌ರವರು, ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಜತೆಗೆ ರಾಫ್ಟಿಂಗ್‌ಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಇಲಾಖೆಯ ಮಾಹಿತಿ ನೀಡಿದರು. ನಂಜರಾಯಪಟ್ಟಣ ಗ್ರಾ.ಪಂ.ಉಪಾಧ್ಯಕ್ಷೆ ಸಮೀರಾ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಕೇಶ್, ನಾನಾ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇತರರು ಇದ್ದರು.

ಉಚಿತ ಶಿಬಿರ
ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಆಯುಷ್ಮಾನ್ ಭಾರತ್ ಆರೋಗ್ಯ ಅಕೌಂಟ್ (ಎಬಿಎಚ್‌ಎ/ಅಭಾ) ಕಾರ್ಡ್ ಯೋಜನೆ ಆರಂಭಿಸಿದೆ. ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಅಭಾ ಕಾರ್ಡ್ ನೋಂದಣಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡುದಾರರಿಗೆ ೫ ಲಕ್ಷದವರೆಗಿನ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.೩೦ ರಷ್ಟು ರಿಯಾಯಿತಿಯು ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್‌ನಿಂದ ದೊರೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಹೇಳಿದರು.


ಗ್ರಾಮಸ್ಥರ ಮನವಿ
ನಂಜರಾಯಪಟ್ಟಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ವಿದ್ಯಾಭ್ಯಾಸಕ್ಕಾಗಿ ಕುಶಾಲನಗರ, ಸಿದ್ದಾಪುರ ಇನ್ನಿತರ ಕಡೆಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿಕೊಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೈನುಗಾರಿಕೆಗೆ ಕುರಿ, ಕೋಳಿಗಳನ್ನು ನೀಡಲಾಗುತ್ತಿದ್ದು. ಇದರ ಪೋಷಣೆಗೆ ಬೇಕಾದ ಕೊಟ್ಟಿಗೆ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಅನುದಾನ ನೀಡುವಂತಾಗಬೇಕು. ಜತೆಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಅಂಗನವಾಡಿಗೆ ಭೇಟಿ
ಕಾರ್ಯಕ್ರಮಕ್ಕೂ ಮೊದಲು ಹೊಸ ಪಟ್ಟಣ ಸಮುದಾಯ ಭವನದ ಪಕ್ಕದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾರವರು ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆ ಅವರಿಂದ ಅಂಗನವಾಡಿ ಸ್ಥಿತಿಗತಿ, ಮಕ್ಕಳ ಪೋಷಣೆ ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಅಂಗನವಾಡಿ ಮುಂಭಾಗದಲ್ಲಿ ಗಿಡ ನೆಡುವುದರ ಮೂಲಕ ’ಜಿಲ್ಲಾಧಿಕಾರಿ ನಡೆಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂದಾಯ ಇಲಾಖೆ ವತಿಯಿಂದ ವೃದ್ಯಾಪ್ಯ ವೇತನ ಮಂಜೂರಾತಿ ಪತ್ರವನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net