ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಕ್ರಮ

Published on

ಧಾರವಾಡ: ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕ ಪರಿಗಣಿಸದೆ ಯೂರಿಯಾ ಸೇರಿ ಎಲ್ಲ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿದ್ದು, ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಕಂಡು ಬಂದಿರುವುದಿಲ್ಲ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ರಾಜ್ಯದ ಬೆಳೆ ಪದ್ಧತಿ ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ 12.95 ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರ ಬೇಡಿಕೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದಿಂದ 11.17 ಲಕ್ಷ ಮೆ.ಟನ್ ಹಂಚಿಕೆ ನಿಗದಿಪಡಿಸಲಾಗಿದೆ. ಈವರೆಗೆ ಸರಬರಾಜು ಮಾಡಿರುವ ರಸಗೊಬ್ಬರವನ್ನು ಸಮರ್ಪಕವಾಗಿ ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಿ ರೈತರಿಗೆ ತೊಂದರೆ ಆಗದಂತೆ ನಿಭಾಯಿಸಲಾಗಿದೆ.

ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆಯಿಂದ ಏಪ್ರಿಲ್‌ನಿಂದ ಈವರೆಗೆ ಆರು ಬಾರಿ ಪತ್ರಗಳನ್ನು ಬರೆದು ಹಂಚಿಕೆಗೆ ಅನುಗುಣವಾಗಿ ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಸಲು ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಜುಲೈ 7ರಂದು ಭೇಟಿ ಮಾಡಿ ಅಗತ್ಯ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿದೆ.

ಇಲಾಖೆಯ ಅಧಿಕಾರಿಗಳು ಪ್ರತಿ ಮಂಗಳವಾರ ಕೇಂದ್ರ ಸರ್ಕಾರ ನಡೆಸುವ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದಲ್ಲಿ ಅವಶ್ಯವಿರುವ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸುತ್ತಿದ್ದಾರೆ. ಆರಂಭಿಕ ಶುಲ್ಕ ಪರಿಗಣಿಸದೆ ಕೊರತೆಯಾಗಿರುವ 81,000 ಮೆ.ಟನ್ ಡಿ.ಎ.ಪಿ. ಮತ್ತು 1,45,000 ಮೆ.ಟನ್. ಯೂರಿಯಾ ರಸಗೊಬ್ಬರವನ್ನು ಕೇಂದ್ರ ಸರ್ಕಾರವು ಪೂರೈಸಿದಲ್ಲಿ ರೈತರ ಬವಣೆ ನೀಗಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net