ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಮ

Oplus_131074
ಸೋಮವಾರಪೇಟೆ ಸಮೀಪದ ಶಾದಿಮಹಲ್ ತೆರಳುವ 37 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಮಂತರ್‌ಗೌಡ ಮಂಗಳವಾರ ಚಾಲನೆ ನೀಡಿದರು. ಗೀತಾ, ಯಶಾಂತ್, ನತೀಶ್, ಯಾಕುಬ್ ಇದ್ದರು.
Published on

ಸೋಮವಾರಪೇಟೆ: ಚೌಡ್ಲು, ಹಾನಗಲ್ಲು, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಕೈಗೊಳ್ಳಲು ಉದ್ದೇಶಿಸಿರುವ ರಸ್ತೆ, ತಡೆಗೋಡೆ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ರಸ್ತೆಯ ಮೂಲಕ ಶಾದಿಮಹಲ್ ಹಾಗೂ ಸ್ಥಳಿಯ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಗೆ ಚಾಲನೆ ನೀಡಿ ನಂತರ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ 37 ಲಕ್ಷ ರೂ., ಅನುದಾನ ಒದಗಿಸಲಾಗಿದೆ. 187 ಮೀಟರ್ ಉದ್ದ ಹಾಗು 5 ಮೀಟರ್ ಅಗಲದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದ್ದು, ಇದರಿಂದಾಗಿ ಶಾದಿ ಮಹಲ್‌ಗೆ ತೆರಳುವವರು, ಸ್ಥಳೀಯ ಮನೆಗಳಿಗೆ ತೆರಳಲು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮುಖ್ಯಮಂತ್ರಿ ವಿಶೇಷ ಅನುದಾನ, 50-54 ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ಇತರ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದ್ದು, ಕಾಮಗಾರಿಗಳು ಕಳಪೆಯಾಗದಂತೆ ಸ್ಥಳೀಯರು ಜಾಗ್ರತೆ ವಹಿಸಬೇಕೆಂದು ಶಾಸಕರು ತಿಳಿಸಿದರು.

ಬೇಳೂರು ಗ್ರಾ.ಪಂ.ನ ಕೆಂಚಮ್ಮನಬಾಣೆಯಲ್ಲಿ ಈಗಾಗಲೇ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಂಡಿದ್ದು, ಮುಂದುವರಿದ ಕಾಮಗಾರಿಗೆ 40 ಲಕ್ಷ ರೂ. ಒದಗಿಸಲಾಗಿದೆ. ಚೌಡ್ಲು ಗ್ರಾ.ಪಂ.ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 84 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗ 32 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಇನ್ನೂ ಹಲವಾರು ರಸ್ತೆ, ಸೇತುವೆ, ಚರಂಡಿ, ಮೋರಿಗಳ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಗ್ರಾ.ಪಂ.ಗಳ ಅನುದಾನದೊಂದಿಗೆ ಶಾಸಕರ ನಿಧಿಯಿಂದಲೂ ರಸ್ತೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್.ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ, ಹಾನಗಲ್ಲು ಗ್ರಾಪಂ ಅಧ್ಯಕ್ಷ ಯಶಾಂತ್‌ಕುಮಾರ್ ಹಾಗೂ ಸಿಬ್ಬಂದಿ, ಪಿಡಿಓಗಳಾದ ರವಿ ನಾಯರ್, ಅಸ್ಮಾ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಆರ್‌ಎಂಸಿ ಮಾಜಿ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ವಿ.ಎ. ಲಾರೆನ್ಸ್, ಕೆ.ಎ. ಯಾಕೂಬ್, ಚೌಡ್ಲು ಚೇತನ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net