

ಕೊಳ್ಳೇಗಾಲ: ಹನೂರು ಕ್ಷೇತ್ರದ ರೈತರ ಹಿತಕ್ಕಾಗಿ ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ತೆಳ್ಳನೂರು ಶಾಖಾ ನಾಲೆಯ 7,800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರೊದಗಿಸುವ ಕಾರ್ಯವನ್ನು ಅನುಷ್ಠಾನಗೊಳಿಸುತ್ತೇನೆ ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.
ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿ ಶನಿವಾರ ರೈತರು ಹಾಗೂ ನೀರಾವರಿ ಇಲಾಖೆ ಕಬಿನಿ ವಿಭಾಗ, ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ತೆಳ್ಳನೂರು ಶಾಖಾ ನಾಲೆಗೆ ನೀರೊದಗಿಸುವ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದರು.
ತೆಳ್ಳನೂರು ಶಾಖಾ ನಾಲೆ ನಂಬಿ ಬದುಕುತ್ತಿರುವ ರೈತರಿಗೆ ಸಂಪೂರ್ಣವಾಗಿ ಕಾಲುವೆ ನೀರಿನ ಸೌಲಭ್ಯ ತಲುಪಿಲ್ಲ. ಕೆಲವು ಲೋಪದೋಷಗಳಿಂದ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸಿಕೊಂಡು ಈ ಭಾಗದ ರೈತರ ಹಿತಕಾಯಬೇಕೆಂಬ ಉದ್ದೇಶದಿಂದ ರೈತರ ಸಭೆ ಕರೆದಿದ್ದೇವೆ. ಈ ಯೋಜನೆ ಅನುಷ್ಠಾನಗೊಂಡರೆ ಕೃಷಿಗೆ ಅನುಕೂಲವಾಗಲಿದೆ. 2025-26 ನೇ ಸಾಲಿನಲ್ಲಿ ಈ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರುತ್ತೇನೆ. ಹಾಗಾಗಿ ತೆಳ್ಳನೂರು ಹಾಗೂ ಚಿಕ್ಕಲ್ಲೂರು ವ್ಯಾಪ್ತಿಯ ಜನರು ಹಾಗೂ ರೈತರ ಸಹಕಾರ ಬೇಕಾಗಿತ್ತು. ಸಭೆಯಲ್ಲಿ ಜನರಿಂದ ಉತ್ತಮ ಬೆಂಬಲ ದೊರೆತಿದೆ ಎಂದರು.
7,800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಈ ಯೋಜನೆ ಜಾರಿ ಕಾರ್ಯ ತ್ವರಿತವಾಗಿ ಆಗಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಸ್ಪಂದಿಸಬೇಕು. 357 ಫಲಾನುಭವಿಗಳ ದಾಖಲಾತಿಗಳ ಅಗತ್ಯವಿದ್ದು ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಕಲೆ ಹಾಕಲಾಗಿದೆ. ಉಳಿದವರು ದಾಖಲೆ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನೀರಾವರಿ ಇಲಾಖೆ ಕಬಿನಿ ಕಾರ್ಯಪಾಲಕ ಇಂಜಿನಿಯರ್ ಈರಣ್ಣ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ 287.19 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಲ್ಲಿ 219.44 ಎಕರೆ ಭೂಸ್ವಾಧೀನವಾಗಿದೆ. ಉಳಿಕೆ 67.75 ಎಕರೆ ಭೂಸ್ವಾಧೀನ ಆಗಬೇಕಿದೆ. ಇದ್ದರಿಂದ ಮೈನರ್‌ಗಳು, ಬ್ರಾಂಚ್‌ಗಳು, ಎಫ್‌ಐಸಿ ಕೆನಾಲ್, ಉಪ ನಾಲೆಗಳು ಮುಚ್ಚಿ ಹೋಗಿವೆ. ಪರಿಣಾಮ ನೀರು ಪೂರೈಸುವ ವಿಚಾರವಾಗಿ ಶಾಸಕರೊಟ್ಟಿಗೆ ಚರ್ಚೆಸಿದ್ದು 2025-26ನೇ ಸಾಲಿನ ವರ್ಷಕ್ಕೆ ಈ ಯೋಜನೆ ಸಂಪೂರ್ಣ ಅನುಷ್ಠಾನಗೊಂಡು ಈ ಭಾಗದ ರೈತರ ಕೃಷಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಸಭೆ ಕರೆದಿದ್ದಾರೆ. 357 ಫಲಾನುಭವಿಗಳ ದಾಖಲಾತಿಗಳ ಅಗತ್ಯವಿರುವ ಬಗ್ಗೆ ಗುರುತಿಸಲಾಗಿದೆ. ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಪಡೆದಿದ್ದೇವೆ. ಉಳಿದವರು ದಾಖಲೆ ನೀಡಲು ಮನವಿ ಮಾಡಿದರು.
ಚಿಕ್ಕಲ್ಲೂರು ಹಾಗೂ ತೆಳ್ಳನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಭೂಮಿ ಇದೆ. ವ್ಯವಸಾಯಕ್ಕೆ ಯೋಗ್ಯವಾಗಿದೆ. ನೀರು ಹಾಗೂ ಕರೆಂಟ್ ನೀಡಿದರೆ ರೈತರ ಕೃಷಿಗೆ ಅನುಕೂಲವಾಗಿದೆ. ಈ ಎರಡು ಪಂಚಾಯಿತಿಯಿಂದ ಸುಮಾರು 3 ಸಾವಿರ ಜನರು ಬೆಂಗಳೂರು ಇನ್ನಿತರ ಕಡೆ ಕೆಲಸಕ್ಕೆ ತೆರಳಿದ್ದಾರೆ. ಆದ್ದರಿಂದ ಕೃಷಿಗೆ ಪೂರಕವಾಗಿ ನೀರಾವರಿ ವ್ಯವಸ್ಥೆ ನೀಡಿದರೆ ಗುಳೆ ಹೋದವರು ಹಿಂದಿರುಗಿ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ರೈತ ದೇವರಾಜು ಮಾತನಾಡಿ, ಹಿಂದೆ ಸರ್ವೇ ನಡೆಸಿದ ರೀತಿಯಲ್ಲಿ ಕಾಲುವೆ ತೋಡಿಸಿಲ್ಲ. ಇದರಿಂದ ನೈಜ ಫಲಾನುಭವಿಗಳಿಗೆ ಪರಿಹಾರ ಸಿಗದಂತೆ ಆಗಿದೆ. ಆದ್ದರಿಂದ ಅಧಿಕಾರಿಗಳು ಪರಿಶೀಲಿಸಬೇಕು. ರೈತರಿಗಿರುವ ಗೊಂದಲ ನಿವಾರಿಸಿ ಎಂದು ಮನವಿ ಮಾಡಿದರು.
ಶಾಸಕರು ಪ್ರತಿಕ್ರಿಯಿಸಿ, ಶೇ.60 ರಷ್ಟು ಫಲಾನುಭವಿಗಳು ಬೆಂಗಳೂರಿನಲ್ಲಿದ್ದಾರೆ. ಅವರಿಂದ ದಾಖಲೆ ಪಡೆದು ಜರೂರಾಗಿ ಪರಿಹಾರ ಕೊಡಿಸಲಾಗುವುದು. ಸ್ಥಳೀಯರು ಈ ಸಭೆಯ ಮಾಹಿತಿಯನ್ನು ಅವರಿಗೆ ತಿಳಿಸಬೇಕು. ಅಲ್ಲದೆ, ಈ ಎರಡು ಪಂಚಾಯಿತಿಗಳ ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮವಹಿಸಲಾಗುತ್ತದೆ. ಸರ್ಕಾರಿ ಜಾಗವನ್ನು ಗುರುತಿಸಿ ಅಂತರ್ಜಲ ಸಮೃದ್ಧಿಗೊಳ್ಳಲು ಕೆರೆಗಳನ್ನು ನಿರ್ಮಿಸಲು ಕ್ರಮವಹಿಸುವ ಆಲೋಚನೆ ಇದೆ. ಇದಕ್ಕೆ ರೈತರ ಸಹಕಾರ ಬೇಕಿದೆ ಎಂದು ಹೇಳಿದರು.
ಭೂಸ್ವಾಧೀನ ಇಲಾಖೆ ವ್ಯವಸ್ಥಾಪಕ ರವಿಚಂದ್ರ ಮಾತನಾಡಿ, ಪರಿಹಾರ ನೀಡುವ ಪ್ರಕ್ರಿಯೆ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಗಡಿ, ಕೊತ್ತನೂರು ಪಿಡಿಒ ಶಿವಕುಮಾರ್, ತೆಳ್ಳನೂರು ಪಿಡಿಒ ಶೋಭಾ ರಾಣಿ, ಸದಸ್ಯರಾದ ಚಿಕ್ಕದೊಡ್ಡಯ್ಯ, ಅರುಣೇಶ್, ರವಿ, ರಾಜಮ್ಮ ಇತರರು ಇದ್ದರು.