ಭೂದಾಖಲೆಗಳ ಡಿಜಿಟಲೀಕರಣಕ್ಕೆ ಕ್ರಮ

16M.D.R.1
ಮದ್ದೂರು ತಾಲೂಕು ಕಚೇರಿಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು. ಡಾ.ಸ್ಮಿತಾ ರಾಮು, ಸೋಮಶೇಖರ್, ಚಂದ್ರಿಕಾ ಇದ್ದರು.
Published on

ಮದ್ದೂರು: ರೈತರು, ಸಾರ್ವಜನಿಕರಿಗೆ ಅಗತ್ಯವಿರುವ ಭೂದಾಖಲೆಗಳ ಸಂರಕ್ಷಣೆಗಾಗಿ ಸರ್ಕಾರ ರಾಜ್ಯದೆಲ್ಲೆಡೆ ಡಿಜಿಟಲೀಕರಣಕ್ಕೆ ಮುಂದಾಗಿದ್ದು, ತಾಲೂಕು ಕಚೇರಿಯಲ್ಲಿ ಕಾರ್ಯಾರಂಭ ಮಾಡಿರುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಮುಂದಿನ ಒಂದು ವರ್ಷದೊಳಗೆ ನಿಗದಿತ ಗುರಿ ತಲುಪುವ ಸಂಬಂಧ ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಳೆಯ ದುಸ್ಥಿತಿಯಲ್ಲಿರುವ ಭೂದಾಖಲೆಗಳನ್ನು ಶಾಶ್ವತವಾಗಿ ಡಿ.ಜಿ. ದಾಖಲೆಗಳಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ರೆಕಾರ್ಡ್ ರೂಂಗಳಿಂದ ದಾಖಲೆ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆಗೆ ಇಲಾಖೆ ಅಗತ್ಯ ಕ್ರಮ ವಹಿಸಿದೆ. ಅಲ್ಲದೆ ನೇರವಾಗಿ ರೈತರೆ ಡಿಜಿಟಲ್ ಮಾಧ್ಯಮದಿಂದ ಭೂದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಅಗತ್ಯ ದಾಖಲೆಗಳನ್ನು ರೈತರ ಕೈಗೆ ತಲುಪಿಸುವ ಯೋಜನೆ ಇದಾಗಿದೆ. ಯಾವುದೇ ವಿಳಂಬ ಅಡೆತಡೆಗಳಿಲ್ಲದೆ ತ್ವರಿತ ಆಡಳಿತ ಸೇವೆ ಒದಗಿಸುವ ಉದ್ದೇಶದಿಂದ ಡಿ.ಜಿ. ಸ್ಪರ್ಶ ನೀಡಿ ಉತ್ತಮ ಜನಪರ ಆಡಳಿತ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಡಾ.ಸ್ಮಿತಾ ರಾಮು ಮಾತನಾಡಿ, ಭೂದಾಖಲೆಗಳ ಕೊಠಡಿಯಲ್ಲಿ ಹಾಲಿ ಲಭ್ಯವಿರುವ ಕೆಲ ದಾಖಲಾತಿಗಳು ಶಿಥಿಲಗೊಂಡಿದೆ. ಅವುಗಳನ್ನು ಮರುಪರಿಶೀಲಿಸಿ ಪತ್ತೆ ಹಚ್ಚಿ ಕಂಪ್ಯೂಟರೀಕರಣಗೊಳಿಸುವ ಮತ್ತು ಅಗತ್ಯ ಸಿಬ್ಬಂದಿ ನಿಯೋಜಿಸಿ ಮುಂದಿನ ಒಂದು ವರ್ಷ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಅಭಿಲೇಖಾಲಯ ಶಿರಸ್ತೇದಾರ್ ಚಂದ್ರಿಕಾ ಹಾಗೂ ಕಂದಾಯ ನಿರೀಕ್ಷಕರು, ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net