ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ
Published on

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸಬೇಕೆಂಬ ಸದುದ್ದೇಶದಿಂದ ವಿವಿಧ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಕ್ರಮವಹಿಸಿರುವುದಾಗಿ ಶಾಸಕ ಕೆ.ಎಂ.ಉದಯ ಹೇಳಿದರು.

ತಾಲೂಕಿನ ಬೆಸಗರಹಳ್ಳಿ ಜಿ.ಪಂ. ವ್ಯಾಪ್ತಿಯ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಡಿ ಬಿಡುಗಡೆಯಾಗಿರುವ 5 ಕೋಟಿ ರೂ. ವೆಚ್ಚದ ನಾಲಾ ಮತ್ತು ನಾಲಾ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಶಾಸಕರಾಗಿದ್ದಾಗಿನಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಈಗಾಗಲೇ 500 ಕೋಟಿ ರೂ. ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿದ್ದು, ನಾಲೆಗಳು, ದಲಿತ ಕಾಲನಿಗಳ ಅಭಿವೃದ್ಧಿ, ರಸ್ತೆ ಡಾಂಬರೀಕರಣ, ಕುಡಿಯುವ ನೀರು, ಏತನೀರಾವರಿ ಪುನಶ್ಚೇತನ ಇನ್ನಿತರ ಯೋಜನೆಗಳಿಗೆ ಕಾರ್ಯೋನ್ಮುಖರಾಗಿರುವುದಾಗಿ ಹೇಳಿದರು.

ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ವಿ.ಸಿ. ನಾಲಾ ಆಧುನೀಕರಣ, ಕೆಮ್ಮಣ್ಣುನಾಲೆ ಮತ್ತು ಬೈರನ್ ನಾಲೆಗಳ ಅಭಿವೃದ್ಧಿಗೂ ಒತ್ತು ನೀಡಿ ಕೊನೆಯ ಭಾಗದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿದು ಬೇಸಾಯ ಮಾಡಲು ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ ಎಂದರು.

ಕೆಲ ಗ್ರಾಮಗಳಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಬನ್ನಹಳ್ಳಿ ಏತನೀರಾವರಿ ಯೋಜನೆಯ ಮೂಲಕ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಜತೆಗೆ ಕೆರೆಗಳಿಗೆ ನೀರು ತುಂಬಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಕೆರಗೋಡು ಶಾಖಾ ವ್ಯಾಪ್ತಿಯ ವಿ.ಸಿ. ನಾಲೆಯ ಅಭಿವೃದ್ಧಿ ಸಂಬಂಧ ಕೆರೆಮೇಗಳದೊಡ್ಡಿ ಒಳಗೊಂಡಂತೆ ರಾಂಪುರದವರೆಗಿನ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಕಾಲುವೆಗಳನ್ನು ದುರಸ್ತಿ ಸಂಬಂಧ ಕಾವೇರಿ ನೀರಾವರಿ ನಿಗಮದಿಂದ 30 ಕೋಟಿ ರೂ. ಅನುದಾನದ ಯೋಜನೆಗೆ ಕ್ರಮ ವಹಿಸಿರುವುದಾಗಿ ಪಕ್ಷಪಾತವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು.

ಬೆಸಗರಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖರ್, ಟಿಎಪಿಸಿಎಂಎಸ್ ನಿರ್ದೇಶಕ ಗೋಪಿ, ಮುಖಂಡ ಪದ್ಮನಾಭ, ವರದರಾಜು, ಪುಟ್ಟಸ್ವಾಮಿ, ರಾಮಣ್ಣ, ವೆಂಕಟೇಶ್, ತಿಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net